Advertisement

ಬಾಲ್ಯ ವಿವಾಹ ತಡೆಗೆ ಅಧಿಕಾರಿಗಳ ಸಹಕಾರ ಅಗತ್ಯ: ಕಟ್ಟೋಳಿ

10:19 AM Jan 11, 2019 | |

ದೇವದುರ್ಗ: ಬಾಲ್ಯವಿವಾಹವು ನಾಗರಿಕ ಸಮಾಜಕ್ಕಂಟಿದ ಪಿಡುಗು. ಇದರ ತಡೆಗೆ ವಿವಿಧ ಇಲಾಖೆ ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ. ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ತಹಶೀಲ್ದಾರ್‌ ಶಿವಶರಣಪ್ಪ ಕಟ್ಟೋಳಿ ಹೇಳಿದರು.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್‌, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಡಾನ್‌ ಬೋಸ್ಕೋ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ದೇವದುರ್ಗ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಬಾಲ್ಯವಿವಾಹ ತಡೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪ್ರತಿಯೊಬ್ಬ ಮಗುವಿಗೂ ಹಕ್ಕುಗಳಿವೆ. ಮಕ್ಕಳ ಹಕ್ಕು ಉಲ್ಲಂಘನೆಯಾಗದಂತೆ ಎಲ್ಲ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಬಸನಗೌಡ ದೇಸಾಯಿ ಮಾತನಾಡಿ, ಬಾಲವಿವಾಹ ತಡೆಗೆ ಸಮಾಜದಲ್ಲಿ ಜಾಗೃತಿ ಜೊತೆಗೆ ಕಾನೂನಿನ ಚೌಕಟ್ಟುಗಳು ಕೂಡ ಕಠಿಣವಾಗಬೇಕು. ಪ್ರತಿಯೊಬ್ಬರಿಗೂ ಶಿಕ್ಷಣದ ಅರಿವು ಮೂಡಿಸುವ ಮೂಲಕ ಬಾಲ್ಯವಿವಾಹವನ್ನು ಸುಲಭವಾಗಿ ತಡೆಗಟ್ಟಬಹುದು ಎಂದರು.

ಪಿಎಸ್‌ಐ ಎಲ್‌.ಬಿ.ಅಗ್ನಿ ಮಾತನಾಡಿ, ಕಾನೂನು ಪರಿಪಾಲಕರಾದ ನಾವು ನಮ್ಮ ಮನೆಯಿಂದಲೇ ಬಾಲ್ಯವಿವಾಹ ಪಿಡುಗು ಹೋಗಲಾಡಿಸಲು ಮುಂದಾಗಬೇಕು. ಇಂತಹ ವಿಚಾರದಲ್ಲಿ ಅಧಿಕಾರಿಗಳು ಮೀನ-ಮೇಷ ಎಣಿಸದೆ, ಮಕ್ಕಳ ಭವಿಷ್ಯತ್ತಿಗೆ ಮುಳ್ಳಾಗುವ ಇಂತಹ ಸಮಾಜ ಕಂಟಕವಾದ ಬಾಲ್ಯವಿವಾಹವನ್ನು ಬೇರು ಸಹಿತ ಕೀಳಬೇಕು ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಸವರಾಜ ಬ್ಯಾಗವಾಟ ಮಾತನಾಡಿ, ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮ, ವೈದ್ಯಕೀಯ ಉದಾಹರಣೆಗಳ ಸಮೇತ ವಿವರಿಸಿದರು. ಮಕ್ಕಳ ಹಕ್ಕು ರಕ್ಷಣೆ ನಮ್ಮೆಲ್ಲರ ಹೊಣೆ. ಆದ್ದರಿಂದ ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಹಾಗೂ ಕಾನೂನು ಪರಿವೀಕ್ಷಣಾಧಿಕಾರಿ ಜಿ.ವೀರಭದ್ರಪ್ಪ ಮಾತನಾಡಿ, ಬಾಲ್ಯವಿವಾಹವು ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಧಕ್ಕೆ ಉಂಟು ಮಾಡುತ್ತದೆ. ಈ ಅಪಾಯಕಾರಿ ಪದ್ಧತಿ ಎಳೆ ತಾಯಂದಿರ ಮರಣ, ಶಿಶು ಮರಣ, ಅಪೌಷ್ಟಿಕತೆಯನ್ನು ಉಂಟು ಮಾಡುತ್ತದೆ. ಬಾಲ್ಯದಲ್ಲೇ ಮದುವೆ ಮಾಡುವುದರಿಂದ ಮಕ್ಕಳ ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ಹೊರುವಂತೆ ಮಾಡುತ್ತದೆ ಎಂದರು. ಡಾನ್‌ ಬೋಸ್ಕೋ ಸಂಸ್ಥೆಯ ಸಿದ್ಧಲಿಂಗಪ್ಪ ಕಾಕರಗಲ್‌, ಡಾನ್‌ ಬೋಸ್ಕೋ ಸೇವಾ ಸಂಸ್ಥೆಯ ಫಾ| ಕುರಿಯಾಕೋಸ್‌, ಸಾಂಸ್ಥಿಕ ರಕ್ಷಣಾ ಅಧಿಕಾರಿ ಹನುಮೇಶ ಜಗ್ಲಿ, ಅಸಾಂಸ್ಥಿಕ ರಕ್ಷಣಾಧಿಕಾರಿ ಕಿರಲಿಂಗಪ್ಪ, ಸಮಾಜ ಕಲ್ಯಾಣಾಧಿಕಾರಿ ಫಕ್ಕೀರಪ್ಪ, ಅಕ್ಷರ ದಾಸೋಹ ಅಧಿಕಾರಿ ಬಂದೋಲಿ ಸಾಬ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಲತಾ, ಲಕ್ಷ್ಮೀ ರಾಠೊಡ, ನಿರ್ಮಲಾ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಎನ್‌ಜಿಒ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next