ಬೆಂಗಳೂರು: ಶ್ರೀಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್, ಗುರು ಸಾರ್ವಭೌಮ, ವಸಿಷ್ಠ ಬ್ಯಾಂಕ್‌ಗಳ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.
ಈ ಕುರಿತು ಎಕ್ಸ್(ಟ್ವಿಟರ್)ನಲ್ಲಿ ಬರೆದುಕೊಂಡಿರುವ ಸಿಎಂ, “ಸಾವಿರಾರು ಠೇವಣಿದಾರರು ತಮ್ಮ ನಿವೃತ್ತಿ ಜೀವನಕ್ಕೆ ಆಧಾರವಾಗಲೆಂದು, ಮಕ್ಕಳ ಮದುವೆ, ಸ್ವಂತ ಮನೆ ಖರೀದಿ ಮುಂತಾದ ಕನಸು ಇಟ್ಟುಕೊಂಡು ತಮ್ಮ ಜೀವಮಾನದ ಉಳಿತಾಯವನ್ನೆಲ್ಲ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದರು. ಬ್ಯಾಂಕಿನವರ ವಂಚನೆಯಿಂದಾಗಿ ಅವರೆಲ್ಲರೂ ಮುಂದಿನ ತಮ್ಮ ಜೀವನದ ಬಗ್ಗೆ ದಿಕ್ಕು ತೋಚದಂತಾಗಿದ್ದಾರೆ. ಠೇವಣಿ ಹಣ ಕಳೆದುಕೊಂ ಡವರ ಹತಾಶೆ, ಸಂಕಟವನ್ನು ಕಣ್ಣಾರೆ ಕಂಡಿದ್ದೇನೆ. ಈ ಕಾರಣಕ್ಕಾಗಿ ಸೂಕ್ತ ತನಿಖೆ ನಡೆಸಿ, ಎಲ್ಲ ಸಂತ್ರಸ್ತರಿಗೂ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುತ್ತಿದ್ದೇನೆ’ ಎಂದಿದ್ದಾರೆ.
ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಠೇವಣಿ ಹೂಡಿದ್ದ ಸಾವಿರಾರು ಮಂದಿಗೆ ಒಟ್ಟು 1,400 ಕೋಟಿ ರೂ. ವಂಚನೆ ಎಸಗಿರುವ ಆರೋಪ ಕೇಳಿ ಬಂದಿತ್ತು. ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಜನರಿಂದ ನೂರಾರು ಕೋಟಿ ರೂ. ಠೇವಣಿಯಿರಿಸಿ ವಂಚಿಸಿದ ಆರೋಪ ಕೇಳಿ ಬಂದಿತ್ತು. ಹೆಚ್ಚಿನ ಬಡ್ಡಿಯ ಆಮಿಷಕ್ಕೊಳಗಾಗಿ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿ ನೂರಾರು ಕೋಟಿ ರೂ. ಹೂಡಿಕೆ ಮಾಡಿದ್ದರು. ವಂಚನೆ ಬೆಳಕಿಗೆ ಬಂದ ಬಳಿಕ ಹೂಡಿಕೆದಾರರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಾಕಷ್ಟು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಯುಬಿ ವೆಂಕಟೇಶ್ ಒತ್ತಾಯಿಸಿದ್ದರು. ಅದರಂತೆ ಸರ್ಕಾರ ಈ ಪ್ರಕರ ಣದ ತನಿಖೆಯನ್ನು ಸಿಬಿಐಗೆ ವಹಿಸಿ ಅಧಿಕೃತವಾಗಿ ಆದೇಶಿಸಿದೆ.
ವಸಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ.: ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ. ಹೆಚ್ಚಿನ ಬಡ್ಡಿ ಕೊಡುವ ಆಮಿಷವೊಡ್ಡಿ ಸಾವಿರಾರು ಗ್ರಾಹಕರಿಂದ ಠೇವಣಿ ಸಂಗ್ರಹಿಸಿತ್ತು. ಸರಿಯಾದ ದಾಖಲೆ, ಭದ್ರತೆ ಇಲ್ಲದೆ ಸಾಲ ಕೊಟ್ಟಿರುವ ಆರೋಪ ಕೇಳಿ ಬಂದಿತ್ತು. ಸಾಲ ವಸೂಲು ಆಗದೆ ಬ್ಯಾಂಕ್ ನಷ್ಟಕ್ಕೆ ಸಿಲುಕಿತ್ತು. ಗ್ರಾಹಕರು ಬಡ್ಡಿ ಸಮೇತ ಠೇವಣಿ ವಾಪಸ್ ಕೇಳಿದಾಗ ಕೊಡ ಲು ಹಣವಿಲ್ಲದ ಪರಿಸ್ಥಿತಿ ಉಂಟಾಗಿತ್ತು. 280 ಕೋಟಿ ರೂ. ಠೇವಣಿದಾರರಿಗೆ ಹಿಂತಿರುಗಿಸದ ಆರೋಪ ಕೇಳಿ ಬಂದಿತ್ತು.
ಗುರುಸಾರ್ವಭೌಮ ಸೊಸೈಟಿ: ರಾಘವೇಂದ್ರ ಬ್ಯಾಂಕ್‌ನ ಮಾದರಿಯಲ್ಲೇ ಗುರುಸಾರ್ವಭೌಮ ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದ ಜನರಿಗೆ ಹೆಚ್ಚಿನ ಬಡ್ಡಿಯ ಆಮೀಷವೊಡ್ಡಿ ಕೋಟ್ಯಂ ತರ ರೂ. ವಂಚನೆ ಎಸಗಿರುವ ಆರೋಪ ಕೇಳಿ ಬಂದಿತ್ತು. ಠೇವಣಿದಾರರು ಹಲವು ಬಾರಿ ಸೊಸೈಟಿ ಎದುರು ಪ್ರತಿಭಟನೆ ನಡೆಸಿ ಹೂಡಿಕೆ ಹಣ ವಾಪಸ್‌ಗೆ ಪ್ರತಿಭಟನೆ ನಡೆಸಿದ್ದರು.