ಮೈಸೂರು: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ತಾವು ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರನೇ ಸುತ್ತಿನ ಪ್ರಚಾರಕ್ಕಾಗಿ ಸೋಮವಾರ ಮೈಸೂರಿಗೆ ಆಗಮಿಸಿ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲೇ ರೋಡ್ ಶೋ ಮೂಲಕ ಮತಯಾಚನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲಿಗೆ ಲಿಂಗಾಂಬುಧಿ ಪಾಳ್ಯಕ್ಕೆ ಬಂದಾಗ ಪುರುಷರೇ ಆರತಿ ಬೆಳಗಿದರು. ಅಲ್ಲಿನ ರಾಮಮಂದಿರ ಹಾಗೂ ಸಿದ್ದೇಶ್ವರ ದೇಗುಲಗಳಿಗೆ ತೆರಳಿ ಮಂಗಳಾರತಿ ಪಡೆದು ರೋಡ್ ಶೋ ಆರಂಭಿಸಿದರು.
ಈ ವೇಳೆ ಮಂಗಳಾರತಿ ತಟ್ಟೆಗೆ ಹಣ ಹಾಕಲು ಜೇಬಿನಿಂದ ಹಣ ತೆಗೆದರಾದರೂ ಕೂಡಲೇ ಎಚ್ಚೆತ್ತು ಕ್ಯಾಮರಾಗಳಿವೆ ಮಂಗಳಾರತಿ ಕಾಸು ಹಾಕೋಕಾಗಲ್ಲ ಕಣಯ್ಯ ಎಂದು ಹೇಳಿ ದೇವಸ್ಥಾನದಿಂದ ಹೊರ ಬಂದರು. ಅಲ್ಲಿನ ರಾಮಮಂದಿರದಲ್ಲಿ ಮಂಗಳಾರತಿ ಪಡೆದು ಹೊರ ಬಂದ ಸಿದ್ದರಾಮಯ್ಯ ಅವರು, ತಮ್ಮನ್ನು ಸ್ವಾಗತಿಸಲು ಬಂದಿದ್ದ ವೀರಭದ್ರ ಕುಣಿತದವರ ಕತ್ತಿ ಪಡೆದು ತಮಟೆ ಸದ್ದಿಗೆ ತಾವೂ ಒಂದೆರಡು ಹೆಜ್ಜೆ ಹಾಕಿದರು.
ಅಲ್ಲಿಂದ ಶ್ರೀರಾಂಪುರಕ್ಕೆ ಬಂದು ಜನರನ್ನು ಉದ್ದೇಶಿಸಿ ಮಾತನಾಡಿ, ಮತಯಾಚನೆ ಮಾಡಿದ ನಂತರ ಶ್ರೀರಾಂಪುರ ಗ್ರಾಪಂ ಸದಸ್ಯ ರಮೇಶ್ ಮನೆಗೆ ತೆರಳಿ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿ, ಹಣ್ಣು ಮತ್ತು ತಂಪು ಪಾನೀಯ ಸೇವಿಸಿ ಹೊರಬಂದರು. ಅಲ್ಲಿಂದ ಮುಂದೆ ಪರಸಯ್ಯನ ಹುಂಡಿಗೆ ಬಂದ ಸಿಎಂ ಅಲ್ಲಿನ ಸಿದ್ದಪ್ಪಾಜಿ ದೇವಸ್ಥಾನಕ್ಕೆ ತೆರಳಿ ಮಂಗಳಾರತಿ ಪಡೆದು ಬಂದರು.
ರಮಾಬಾಯಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿಯವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಅಲ್ಲಿಂದ ಶಂಕರಲಿಂಗೇಗೌಡ ಬಡಾವಣೆ, ಸೀಟಿನ ಬಡಾವಣೆ, ಗುರೂರು, ಕಳಲವಾಡಿ, ಮಹದೇವಪುರ, ಮುನಿಸ್ವಾಮಿ ನಗರ, ಕೊಪ್ಪಲೂರು, ಬಂಡೀಪಾಳ್ಯ, ಹೊಸಹುಂಡಿ, ಏಳಿಗೆಹುಂಡಿ, ಉತ್ತನಹಳ್ಳಿ, ಆಲನಹಳ್ಳಿ, ಬೆಲವತ್ತ, ಜಯದೇವ ನಗರಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಜೊತೆಯಾದ ಎಚ್‌ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಎರಡು ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದಾಗಲೂ ಹತ್ತಿರಕ್ಕೆ ಸುಳಿಯದೇ ಇದ್ದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸೋಮವಾರ ಇಡೀ ದಿನ ಸಿದ್ದರಾಮಯ್ಯ ಜೊತೆಗಿದ್ದರು. ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಶಾಸಕ ಸತ್ಯನಾರಾಯಣ, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಸಿದ್ದರಾಮಯ್ಯ ಜೊತೆಗಿದ್ದರು.