Advertisement

ಚುನಾವಣೆಗೆ ಸನ್ನದ್ಧರಾಗಲು ಸಿಎಂ ಸೂಚ‌ನೆ

11:40 AM Jun 10, 2017 | Team Udayavani |

ಬೆಂಗಳೂರು: ಇನ್ನೇನು ಹತ್ತು ತಿಂಗಳಲ್ಲಿ ಚುನಾವಣೆ ಬರಲಿದೆ. ಇನ್ನೂ ಒಂದು ವರ್ಷ ಸಮಯ ಇದೆ ಎಂದು ಸುಮ್ಮನೆ ಕೂಡಬೇಡಿ, ಈಗಿನಿಂದಲೇ ಚುನಾವಣೆಯ ಸಿದ್ಧತೆ ಮಾಡಿಕೊಳ್ಳುವಂತೆ ಪಕ್ಷದ ಶಾಸಕರಿಗೆ ಮುಖ್ಯಮಂತ್ರಿ
ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Advertisement

ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ಸಂಬಂಧ ಮಾತನಾಡಿರುವ ಸಿದ್ದರಾಮಯ್ಯ, ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಆ ಸಮೀಕ್ಷೆ ಆಧಾರದಲ್ಲಿ ಪಕ್ಷ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆ ಇದೆ. ಹೀಗಾಗಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಚುನಾವಣೆವರೆಗೂ
ಇದೇ ಒಗ್ಗಟ್ಟು ಮುಂದುವರಿದರೆ, ಮತ್ತೆ ಅಧಿಕಾರಕ್ಕೆ ಬರಲು ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಶಾಸಕರಿಗೆ ಕಿವಿ
ಮಾತು ಹೇಳಿದ್ದಾರೆ ಎನ್ನಲಾಗಿದೆ. ಹಾಲಿ ಶಾಸಕರಷ್ಟೇ ಅಲ್ಲ, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಜೊತೆಯೂ ಮಾತುಕತೆ ನಡೆಸಿ, ಅವರ ಕ್ಷೇತ್ರಗಳಲ್ಲಿಯೂ ಈಗಿನಿಂದಲೇ ಚುನಾವಣೆ ಸಿದ್ಧತೆ ಮಾಡಿಕೊಳ್ಳುವುದು ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸೂಚಿಸಲಾಗುವುದು ಎಂದು ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಲಮನ್ನಾ ಸೂಕ್ತ ಸಂದರ್ಭದಲ್ಲಿ ತೀರ್ಮಾನ: “ರಾಜ್ಯದಲ್ಲಿ ಸರ್ಕಾರ ಯಾಕೆ ರೈತರ ಸಾಲಮನ್ನಾ ಮಾಡುತ್ತಿಲ್ಲ’ ಎಂದು ಆಡಳಿತ ಪಕ್ಷದ ಶಾಸಕರೇ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ವಪಕ್ಷದ ಶಾಸಕರ ಪ್ರಶ್ನೆಗೆ ವಿವರವಾಗಿ ಉತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸಾಲ ಮನ್ನಾ ಮಾಡುವ ಬಗ್ಗೆ ಈ ವರ್ಷ ಬಜೆಟ್‌ನಲ್ಲಿ ಘೋಷಣೆ ಮಾಡಿಲ್ಲ. ಅಲ್ಲದೇ ಈ ಬಗ್ಗೆ ಕೇಂದ್ರ ಸರ್ಕಾರ ಕೂಡ ಸ್ಪಂದಿಸಬೇಕಾಗುತ್ತದೆ. ಆದರೆ,
ಕೇಂದ್ರ ಸರ್ಕಾರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಸಾಲಮನ್ನಾ ವಿಷಯದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿಯ ಬಗ್ಗೆ
ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದರು.

“ಉತ್ತರ ಪ್ರದೇಶ ಸರ್ಕಾರ ಘೋಷಣೆ ಮಾಡಿದಷ್ಟು ಹಣವನ್ನು ರೈತರ ಸಾಲ ಮನ್ನಾಕ್ಕೆ ನೀಡುತ್ತಿಲ್ಲ. ಉತ್ತರ ಪ್ರದೇಶ
ಸರ್ಕಾರ ರೈತರ ಸಾಲ ಮನ್ನಾಕ್ಕೆ ಕೇವಲ 2 ಸಾವಿರ ರೂ. ಮಾತ್ರ ಖರ್ಚು ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ
ಸರ್ಕಾರ ಸಹಕಾರ ನೀಡಿದರೆ, ಸಾಲ ಮನ್ನಾ ಮಾಡುವ ಬಗ್ಗೆ ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಈ ವರ್ಷದ ಆರ್ಥಿಕ ಆದಾಯದ ಲೆಕ್ಕಾಚಾರ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಶಾಸಕರಿಗೆ
ವಿವರಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ಬಜೆಟ್‌ ಹೊತ್ತಿಗೆ ಕೇಂದ್ರ ಸರ್ಕಾರ ಸ್ಪಂದಿಸದೇ ಹೋದರೆ, ರಾಜ್ಯ ಸರ್ಕಾರ ಸಾಲ ಮನ್ನಾ ಮಾಡುವ ಕುರಿತು ಘೋಷಿಸುವ ಬಗ್ಗೆ ಸಿಎಂ ಸಭೆಯಲ್ಲಿ ಪರೋಕ್ಷ ಸುಳಿವು ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಸಚಿವರ ತರಾಟೆಗೆ ತೆಗೆದುಕೊಂಡ ಶಾಸಕ ?
ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಹುಣಸೂರು ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೊರತೆ ನೆಪದಲ್ಲಿ ಮಂಜೇಗೌಡ ಎಂಬ ಗಣಿತ ಶಾಸ್ತ್ರ ಉಪನ್ಯಾಸಕರನ್ನು ಮೈಸೂರಿಗೆ ವರ್ಗಾವಣೆ ಮಾಡಿಸಲು ಪ್ರಭಾವ ಬೀರಿದ್ದೀರಿ ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್‌ ಸೇs… ರನ್ನು ಹುಣಸೂರು ಶಾಸಕ ಮಂಜುನಾಥ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹುಣಸೂರು ಪದವಿ ಪೂರ್ವ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳಿದ್ದರೂ,
ವಿದ್ಯಾರ್ಥಿಗಳ ಕೊರತೆಯಿಂದ ಕೆಲಸ ಇಲ್ಲ ಎಂದು ಉಪನ್ಯಾಸಕರನ್ನು ವರ್ಗಾವಣೆ ಮಾಡಿರುವುದರಿಂದ
ವಿದ್ಯಾರ್ಥಿಗಳಿಗೆ ಪಾಠ ಮಾಡಲು ಉಪನ್ಯಾಸಕರಿಲ್ಲದೇ ತೊಂದರೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರೇ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next