Advertisement
ಆದರೂ ಈ ಚುನಾವಣೆಯಲ್ಲಿ 43 ಸ್ಥಾನಗಳನ್ನಷ್ಟೇ ಪಡೆದ ಜೆಡಿಯು ಬದಲು 74 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಪಕ್ಷದ ನಾಯಕರೇ ರಾಜ್ಯದ ನೇತೃತ್ವ ವಹಿಸುವುದು ಸಮಂಜಸ ಎನ್ನುವ ಭಾವನೆ ಪಕ್ಷದ ಆಂತರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಈ ವಿಷಯದಲ್ಲಿ ನಿತೀಶ್ ಕೂಡ ಮೊದಲಿನಂತೆ ಹಕ್ಕುಸ್ಥಾಪನೆಗೆ ಪ್ರಯತ್ನಿಸುತ್ತಿಲ್ಲ. ಬಿಹಾರ ಸಿಎಂ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ನಿತೀಶ್ “”ನಾನು ಸಿಎಂ ಹುದ್ದೆಗೆ ಹಕ್ಕುಸ್ಥಾಪನೆ ಮಾಡಿಲ್ಲ. ಶುಕ್ರವಾರ ಎನ್‌ಡಿಎದ ನಾಲ್ಕೂ ಪಕ್ಷಗಳು ಸಭೆ ನಡೆಸಿ ನಿರ್ಣಯಕ್ಕೆ ಬರಲಿವೆ” ಎಂದಿದ್ದಾರೆ.
Related Articles
ಗುರುವಾರ ತೇಜಸ್ವಿ ಯಾದವ್ ಮಹಾಘಟಬಂಧನದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಡಿಎ ಮತ್ತು ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. “”ನಮಗೆ ಜನಬೆಂಬಲ ಸಿಕ್ಕಿದೆ. ಆದರೆ ಎನ್‌ಡಿಎ ಧನಬಲ ಹಾಗೂ ಕುತಂತ್ರದಿಂದ ಚುನಾವಣೆ ಗೆದ್ದಿದೆ” ಎಂದಿದ್ದಾರೆ. ನಿತೀಶ್ ಕುಮಾರ್ ಬಗ್ಗೆ ಪ್ರಶ್ನೆ ಎದುರಾದಾಗ “‘ಅವರು ಆತ್ಮಸಾಕ್ಷಿಯ ಧ್ವನಿಗೆ ಕಿವಿಗೊಟ್ಟು, ಕುರ್ಚಿಯ ವ್ಯಾಮೋಹ ಬಿಡಬೇಕು” ಎಂದು ಕುಟುಕಿದ್ದಾರೆ ತೇಜಸ್ವಿ. 2017ರಲ್ಲಿ ನಿತೀಶ್ ಕುಮಾರ್ ಆರ್‌ಜೆಡಿಯಿಂದ ಮೈತ್ರಿತುಂಡರಿಸಿಕೊಂಡು ಎನ್‌ಡಿಎ ಸೇರಿದ್ದಾಗ, “”ನಾನು ಆತ್ಮಸಾಕ್ಷಿಗೆ ಓಗೊಟ್ಟು ಹೊರಬಂದಿದ್ದೇನೆ” ಎಂದಿದ್ದರು. ಆ ಮಾತನ್ನೇ ತೇಜಸ್ವಿ ನೆನಪಿಸಿದ್ದಾರೆ!
Advertisement