Advertisement

ಸಿಎಂ ಆಗಮನ: ಜಿಲ್ಲಾಡಳಿತದಿಂದ ಸಿದ್ಧತೆ

03:47 PM Jul 31, 2022 | Team Udayavani |

ಕೊಪ್ಪಳ: ಸಿಎಂ ಬಸವರಾಜ ಬೊಮ್ಮಾಯಿ ಅವರು ಆ. 1ರಂದು ಜಿಲ್ಲೆಗೆ ಆಗಮಿಸಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರ ನೇತೃತ್ವದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ತಂಡದಿಂದ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಲಾಯಿತು.

Advertisement

ಸಿಎಂ ಆ. 1ರಂದು ಮಧ್ಯಾಹ್ನ 12ಕ್ಕೆ ಗಂಗಾವತಿ ತಾಲೂಕಿನ ಆನೆಗುಂದಿಗೆ ಹೆಲಿಕಾಪ್ಟರ್‌ ಮೂಲಕ ಆಗಮಿಸುವರು. ಬಳಿಕ ಸಮೀಪದ ಅಂಜನಾದ್ರಿ ಬೆಟ್ಟ ಪ್ರದೇಶಕ್ಕೆ ಭೇಟಿ ನೀಡಿ, ಪೂಜಾ ಕಾರ್ಯ ನೆರವೇರಿಸುವರು. ಬಳಿಕ ಮಧ್ಯಾಹ್ನ 2:30ಕ್ಕೆ ಹೆಲಿಕಾಪ್ಟರ್‌ ಮೂಲಕ ಕೊಪ್ಪಳಕ್ಕೆ ಆಗಮಿಸಿ, ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನೆ ನೆರವೇರಿಸುವರು. ಬಳಿಕ ಗವಿಮಠಕ್ಕೆ ಭೇಟಿ ನೀಡಿ, ಸಂಜೆ 4:15ಕ್ಕೆ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ಹಿಂದಿರುಗುವರು. ಇದೇ ಸಂದರ್ಭದಲ್ಲಿ ವಿವಿಧ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಡಿಸಿ ಎಂ. ಸುಂದರೇಶ ಬಾಬು ಅವರು, ವಿವಿಧ ಅಧಿಕಾರಿಗಳೊಂದಿಗೆ ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆ ಆವರಣ ಸ್ವಚ್ಛಗೊಳಿಸುವುದು, ಆವರಣದಲ್ಲಿ ವಾಹನಗಳ ಸಂಚಾರ ವ್ಯವಸ್ಥೆ ಅಲ್ಲದೇ ನೂತನ ಆಸ್ಪತ್ರೆಯಲ್ಲಿ ಆಗಬೇಕಾದ ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೆಲಿಪ್ಯಾಡ್‌ ನಿರ್ಮಿಸುತ್ತಿರುವ ಕ್ರೀಡಾಂಗಣ ಪರಿಶೀಲನೆ ನಡೆಸಿದರು.

ಸಿಎಂ ಗವಿಮಠಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳನ್ನು ಭೇಟಿ ಮಾಡಿ, ಕಾರ್ಯಕ್ರಮದ ಕುರಿತು ಚರ್ಚೆ ನಡೆಸಿದರು. ಬಳಿಕ ಅಂಜನಾದ್ರಿ ಬೆಟ್ಟಕ್ಕೆ ತೆರಳಿದ ಜಿಲ್ಲಾಧಿಕಾರಿ, ಸಿಎಂಗೆ ಸಮರ್ಪಕ ಮಾಹಿತಿ ಒದಗಿಸಲು ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿದರು.

ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆನೆಗೊಂದಿಯಲ್ಲಿ ನಿರ್ಮಿಸುತ್ತಿರುವ ಹೆಲಿಪ್ಯಾಡ್‌ ಸ್ಥಳಕ್ಕೆ ಭೇಟಿ ನೀಡಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು, ಮುಖ್ಯಮಂತ್ರಿಗಳು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸುವ್ಯವಸ್ಥೆಯಿಂದ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಎಸ್ಪಿ ಅರುಣಾಂಗ್ಷುಗಿರಿ, ಎಡಿಸಿ ಎಂ.ಪಿ. ಮಾರುತಿ, ಎಸಿ ಬಸವಣ್ಣೆಪ್ಪ ಕಲಶೆಟ್ಟಿ, ಜಿಪಂ ಉಪಕಾರ್ಯದರ್ಶಿ ಸಮೀರ್‌ ಮುಲ್ಲಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next