ಲಕ್ನೋ: ಇತ್ತೀಚೆಗೆ ಉತ್ತರಪ್ರದೇಶ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಸುಮಾರು 7,000 ಸಾವಿರಕ್ಕೂ ಹೆಚ್ಚು ಅನಧಿಕೃತ ಮದರಸಾಗಳನ್ನು ಗುರುತಿಸಿರುವುದಾಗಿ ವರದಿ ತಿಳಿಸಿದೆ. ರಾಜ್ಯದಲ್ಲಿರುವ ಅನಧಿಕೃತ ಮದರಸಾಗಳನ್ನು ಮುಚ್ಚುವ ಸಾಧ್ಯತೆ ಇದ್ದಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಭಯೋತ್ಪಾದನೆಯ ದಮನಕ್ಕೆ ಎಚ್ಚರ ಅಗತ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸರ್ಕಾರದ ಆದೇಶದ ಅವಶ್ಯಕತೆಗಳನ್ನು ಪೂರೈಸಿದ ನಂತರ ಅನಧಿಕೃತ ಮದರಸಾಗಳನ್ನು ಗುರುತಿಸುವ ನಿಟ್ಟಿನಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ನವೆಂಬರ್ 15ರೊಳಗೆ ಜಿಲ್ಲಾಧಿಕಾರಿಗೆ ವರದಿಯನ್ನು ಸಲ್ಲಿಸಿದ ನಂತರವಷ್ಟೇ ಅನಧಿಕೃತ ಮದರಸಾಗಳ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.
ಮದರಸಾಗಳ ನಿಖರವಾದ ಸಂಖ್ಯೆಗಳನ್ನು ಗುರುತಿಸುವ ಪ್ರಕ್ರಿಯೆಗೆ ಇನ್ನಷ್ಟು ಕಾಲಾವಕಾಶ ತೆಗೆದುಕೊಳ್ಳಲಿದೆ ಎಂದು ಉತ್ತರಪ್ರದೇಶ ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಇಫ್ತಿಕರ್ ಅಹ್ಮದ್ ಜಾವೇದ್ ತಿಳಿಸಿದ್ದು, ಗುರುವಾರ ಸಂಜೆವರೆಗೆ 75 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅಂದಾಜು 7,500 ಅನಧಿಕೃತ ಮದರಸಾಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ 16,513 ಮಾನ್ಯತೆ ಪಡೆದ ಮದರಸಾಗಳಿವೆ, ಇದರಲ್ಲಿ 560 ಮದರಸಾಗಳಿಗೆ ಸರ್ಕಾರದ ಅನುದಾನ( ಶಿಕ್ಷಕರು ಸೇರಿದಂತೆ ಸಿಬಂದಿಗಳ ಸಂಬಳ) ನೀಡಲಾಗಿದೆ. ಅಂದಾಜು 350 ಮದರಸಾಗಳಲ್ಲಿ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂದು ವರದಿ ತಿಳಿಸಿದೆ.