ವಾರಾಣಸಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಹರ್ರುವಾದ ಕಾಝಿ ಸರೈ ಪ್ರದೇಶದಲ್ಲಿ 51 ಅಡಿ ಎತ್ತರದ ಭಗವಾನ್ ಹನುಮಂತನ ವಿಗ್ರಹವನ್ನು ಅನಾವರಣಗೊಳಿಸಿದರು.
ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಯೋಗಿ ಅವರು ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ವಿಧಿ-ವಿಧಾನ ನೆರವೇರಿಸುವ ಮೂಲಕ ಒಂದು ದಿನದ ವಾರಾಣಸಿ ಭೇಟಿಯನ್ನು ಮುಕ್ತಾಯಗೊಳಿಸಿದ್ದರು.
ಜನಾಕರ್ಷಣಿಯ ಈ ಹನಮಂತ ವಿಗ್ರಹವನ್ನು ರಾಜಸ್ಥಾನದ ಶಿಲ್ಪಿಗಳು ಎರಡು ವರ್ಷಗಳ ಕಾಲ ಕೆತ್ತಿ, ರೂಪುಗೊಳಿಸಿದ್ದರು. ಇಲ್ಲಿನ ಜೈ ಹನುಮಾನ್ ಶ್ರೀ ಪೀಠ ಟ್ರಸ್ಟ್ ಹನುಮಾನ್ ಪ್ರತಿಮೆಯನ್ನು ಸ್ಥಾಪಿಸಿದೆ.
ಹನುಮಂತ ಪ್ರತಿಮೆ ಕಾಶಿ ಜನತೆಯ ವಿಶ್ವಾಸದ ಪ್ರತೀಕವಾಗಿದೆ ಎಂದು ಸಿಎಂ ಯೋಗಿ ಬಣ್ಣಿಸಿದರು. ಪ್ರತಿಮೆ ಅನಾವರಣಕ್ಕೂ ಮುನ್ನ ಸಿಎಂ ಯೋಗಿ ಅವರು ಕಾಲ ಭೈರವ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಾರಾಣಸಿ ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ, ಪ್ರಾದೇಶಿಕ ಅಭಿವೃದ್ಧಿ, ಸಮಸ್ಯೆಗಳ ಕುರಿತು ಚರ್ಚೆ ನಡೆಸಿರುವುದಾಗಿ ವರದಿ ತಿಳಿಸಿದೆ.