ನವದೆಹಲಿ:ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಇನ್ನು ಮೂರು ದಿನದೊಳಗೆ ಬಾಂಬ್ ಸ್ಫೋಟಿಸಿ ಹತ್ಯೆಗೈಯಲಾಗುವುದು ಎಂದು ಲಕ್ನೋ ಪೊಲೀಸರ ಸಹಾಯವಾಣಿ ಸಂಖ್ಯೆಗೆ ಮತ್ತೊಮ್ಮೆ ಕೊಲೆ ಬೆದರಿಕೆ ಸಂದೇಶ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ತೆಲಂಗಾಣ : ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ನಾಯಕನ ಶವ ಪತ್ತೆ, ಕಾರಣ ನಿಗೂಢ
ವರದಿಯ ಪ್ರಕಾರ, ಲಕ್ನೋ ಪೊಲೀಸ್ ಕಂಟ್ರೋಲ್ ರೂಂನ ಹೆಲ್ಪ್ ಲೈನ್ ನ ವಾಟ್ಸಪ್ ನಂಬರ್ ಗೆ ಆಗಸ್ಟ್ 2ರಂದು ಬೆದರಿಕೆ ಸಂದೇಶ ಬಂದಿರುವುದಾಗಿ ವಿವರಿಸಿದೆ. ಮೂರು ದಿನದೊಳಗೆ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಬಾಂಬ್ ಸ್ಫೋಟಿಸಿ ಹತ್ಯೆಗೈಯಲಾವುದು ಎಂದು ಬೆದರಿಕೆಯೊಡ್ಡಲಾಗಿದೆ.
ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ಸಂದೇಶ ರವಾನಿಸಿದವನ ಗುರುತು ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇಶಾದ್ಯಂತ ಆಗಸ್ಟ್ 15ರಂದು 75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವ ಆಚರಣೆ ನಡೆಸುವ ಮುನ್ನವೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಈ ಬೆದರಿಕೆ ಸಂದೇಶ ಬಂದಿದೆ. ಈ ಮೊದಲು ಕೂಡಾ ಹಲವಾರು ಬಾರಿ ಬೆದರಿಕೆ ಸಂದೇಶ ಬಂದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.