ಮಂಗಳೂರು/ಉಡುಪಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಡಿ. 25ರಂದು ಕರಾವಳಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 10.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, 11.45ಕ್ಕೆ ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಯೋಜಿಸಿರುವ 17ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳ ಉತ್ಸವ ಮತ್ತು ವೀರರಾಣಿ ಅಬ್ಬಕ್ಕ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸುವರು.
ಮಧ್ಯಾಹ್ನ 2.30ಕ್ಕೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀಕೃಷ್ಣ ಮಠದ ವತಿಯಿಂದ ನಡೆಯುವ ಚಿಣ್ಣರ ಮಾಸ ಹಾಗೂ ಸ್ವತ್ಛ ಭಾರತ ಅಭಿಯಾನದಡಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಶೌಚಾಲಯ ಸಮುಚ್ಚಯದ ಉದ್ಘಾಟನೆ ನೆರವೇರಿಸಲಿದ್ದಾರೆ.
3.20ಕ್ಕೆ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುತ್ಯಾರು ಯಾಗ ಸಂಘಟನ ಸಮಿತಿ ವತಿಯಿಂದ ನಡೆಯುವ ಲೋಕ ಸಹಸ್ರನಾಮ ನವಕುಂಡ ಗಣಪತಿ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 4.50ಕ್ಕೆ ಕಾಪು ತಾಲೂಕಿನ ಪೊಲಿಪುವಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವತಿಯಿಂದ ನಡೆಯುವ ಸರಕಾರಿ ಹಿ.ಪ್ರಾ. ಶಾಲೆಯ ಶತಮಾನೋತ್ಸವ ಮತ್ತು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಜ್ರ ಮಹೋತ್ಸವ ಹಾಗೂ ಕಾಲೇಜು ವಿಭಾಗದ ಸ್ವರ್ಣ ಮಹೋತ್ಸವ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 6.15ಕ್ಕೆ ನಗರದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯುವ ಸಮಾಜಮುಖಿ ಚಿಂತಕ ಕೆ. ಪ್ರಕಾಶ್ ಶೆಟ್ಟಿ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ “ಪ್ರಕಾಶಾಭಿನಂದನ’ದಲ್ಲಿ ಭಾಗವಹಿಸಲಿದ್ದಾರೆ.