Advertisement

ನ.25, 26ರಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಸಿ.ಎಂ: ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ

06:58 PM Nov 18, 2020 | mahesh |

ಹನೂರು ( ಚಾಮರಾಜನಗರ): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದೇ ತಿಂಗಳ 25 ಮತ್ತು 26 ರಂದು ಮಲೆ ಮಹದೇಶ್ವರ ಬೆಟ್ಟದ ಪ್ರವಾಸ ಕೈಗೊಂಡಿದ್ದು ಅಂದಾಜು 13.84 ಕೋಟಿ ವೆಚ್ಚದ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ 110 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Advertisement

ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿಗಳು ನ.25 ರಂದು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದು ಸಂಜೆ 5 ಗಂಟೆಗೆ ನಾಗಮಲೆ ಭವನದಲ್ಲಿ ಪ್ರಾಧಿಕಾರದ ಸಭೆ ನಡೆಸಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ನ.26ರ ರಂದು ಬೆಳಿಗ್ಗೆ 10:30ಕ್ಕೆ ರಂಗಮಂದಿರದ ಆವರಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ 13.84ಕೋಟಿ ವೆಚ್ಚದಲ್ಲಿ ಕೈಗೊಂಡಿರುವ 8 ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ 110 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ 9 ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳು: ಕಾರ್ಯಕ್ರಮದಲ್ಲಿ ಸುತ್ತೂರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ದಿವ್ಯಸಾನಿಧ್ಯವಹಿಸಲಿದ್ದಾರೆ. ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆಯ ಸಚಿವರು ಹಾಗೂ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್, ಶಾಸಕ ಆರ್.ನರೇಂದ್ರ ರಾಜೂಗೌಡ, ಸಂಸದ ಶ್ರೀನಿವಾಸ್ ಪ್ರಸಾದ್, ಶಾಸಕರಾದ ಪುಟ್ಟರಂಗಶೆಟ್ಟಿ, ಎನ್.ಮಹೇಶ್, ನಿರಂಜನ್‍ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಧರ್ಮಸೇನಾ, ಮರಿತಿಬ್ಬೇಗೌಡ, ಸಂದೇಶ್ ನಾಗರಾಜು, ಕೆ.ಟಿ.ಶ್ರೀಕಂಠೇಗೌಡ, ಜಿ.ಪಂ ಅಧ್ಯಕ್ಷೆ ಅಶ್ವಿನಿ, ತಾ.ಪಂ ಅಧ್ಯಕ್ಷೆ ಸವಿತಾ, ಜಿ.ಪಂ ಸದಸ್ಯರು, ತಾ.ಪಂ ಸದಸ್ಯರು , ಪ್ರಾಧಿಕಾರದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಉದ್ಘಾಟನೆಗೊಳ್ಳಲಿರುವ ಕಾಮಗಾರಿಗಳು: 4.86ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಾರ್ಮಿಟರಿ, 4.27 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಅಂತರಗಂಗೆ ಕಲ್ಯಾಣಿ, 2.15ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಉಪಹಾರ ಮಂದಿರ, 1.23 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ 65 ಶೌಚಾಲಯ, 50 ಲಕ್ಷ ವೆಚ್ಚದಲ್ಲಿ ನಾಗಮಲೆ ಭವನದ ಸಭಾಂಗಣವನ್ನು ವಿಡಿಯೋ ಕಾನ್ಫರೆನ್ಸ್ ಆಗಿ ಮಾರ್ಪಾಡು ಮಾಡಿರುವ ಕಾಮಗಾರಿ, 45 ಲಕ್ಷ ವೆಚ್ಚದ ಮಾಹಿತಿ ಕೇಂದ್ರ, 25 ಲಕ್ಷ ವೆಚ್ಚದಲ್ಲಿ ಪಾರ್ಕಿಂಗ್ ಯಾರ್ಡ್ ಬಳಿ ನಿರ್ಮಿಸಿರುವ ಶೌಚಾಲಯಗಳು ಮತ್ತು 12.5ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಒಳಪ್ರಾಂಗಣದ ಕೊಠಡಿ ನವೀಕರಣ ಕಾಮಗಾರಿಯನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಲಿದ್ದಾರೆ.

ಶಂಕುಸ್ಥಾಪನೆ ನೆರವೇರಲಿರುವ ಕಾಮಗಾರಿಗಳು: ಕಾರ್ಯಕ್ರಮದಲ್ಲಿ 45 ಕೋಟಿ ವೆಚ್ಚದ 416 ಕೊಠಡಿಗಳ ಅತಿಥಿಗೃಹ ನಿರ್ಮಾಣ ಕಾಮಗಾರಿ, 24 ಕೋಟಿ ವೆಚ್ಚದಲ್ಲಿ ದೇವಾಲಯದ ಹಿಂಭಾಗ ಸರದಿ ಸಾಲಿನ ಸಂಕೀರ್ಣ ನಿರ್ಮಾಣ ಕಾಮಗಾರಿ, 22 ಕೋಟಿ ವೆಚ್ಚದಲ್ಲಿ ತಾಳಬೆಟ್ಟದಿಂದ ಪಾದಯಾತ್ರಿಗಳು ಆಗಮಿಸುವ ಮಾರ್ಗದ ಮೆಟ್ಟಿಲುಗಳಿಗೆ ಗ್ರಾನೈಟ್ ಮೆಟ್ಟಲು ನಿರ್ಮಾಣ ಮತ್ತು ಅಗತ್ಯ ಮೂಲಸೌಕರ್ಯ ಕಾಮಗಾರಿ, 7.90ಕೋಟಿ ವೆಚ್ಚದಲ್ಲಿ 2ನೇ ಹಂತದ ಡಾರ್ಮಿಟರಿ ಕಟ್ಟಡ ನಿರ್ಮಾಣ ಕಾಮಗಾರಿ, 4.80 ಕೋಟಿ ವೆಚ್ಚದಲ್ಲಿ ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿ, 3 ಕೋಟಿ ವೆಚ್ಚದಲ್ಲಿ ಹೆಲಿಪ್ಯಾಡ್‍ನಿಂದ ದಾಸೋಹ ಭವನದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ, 1.35ಕೋಟಿ ವೆಚ್ಚದಲ್ಲಿ ಕತ್ತಿಪವಾಡ ಸ್ಥಳದಿಂದ ತಂಬಡಗೇರಿ ಮಾರ್ಗವಾಗಿ ಎಸ್‍ಬಿಎಂ ವೃತ್ತದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ, 98ಲಕ್ಷ ವೆಚ್ಚದ ಪೊಲೀಸ್ ವಸತಿ ಗೃಹ ರಸ್ತೆಯ ಅಭಿವೃದ್ಧಿ ಕಾಮಗಾರಿ ಮತ್ತು 90 ಲಕ್ಷ ವೆಚ್ಚದ ಲಾಡು ತಯಾರಿಕೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Advertisement

ಮುಖ್ಯಮಂತ್ರಿಗಳಿಗೆ ಅಧಿಕೃತ ಆಹ್ವಾನ: ಸಚಿವ ಸುರೇಶ್‍ಕುಮಾರ್ ಮತ್ತು ಪ್ರಾಧಿಕಾರದ ಉಪಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next