Advertisement

ಸಿಎಂಗೆ ಪಾಸಿಟಿವ್‌: ಬೆಳಗಾವಿ ಜಿಲ್ಲೆಯ ನಾಯಕರಲ್ಲಿ ಆತಂಕ

07:17 PM Apr 17, 2021 | Team Udayavani |

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿದ್ದರಿಂದ ಜಿಲ್ಲೆಯ ನಾಯಕರು, ಸ್ವಾಮೀಜಿಗಳಲ್ಲಿ ಆತಂಕ ಶುರುವಾಗಿದೆ. ಎರಡು ದಿನಗಳ ಕಾಲ ಬೆಳಗಾವಿ ಲೋಕಸಭೆ ಉಪಚುನಾವಣೆ ಪ್ರಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಿದ್ದರು. ತೀವ್ರ ಜ್ವರ ಹಾಗೂ ಸುಸ್ತಿನಿಂದ ಬಳಲುತ್ತಿದ್ದ ಅವರು ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದರು. ಶುಕ್ರವಾರ ಕೊರೊನಾ ಪಾಸಿಟಿವ್‌ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಅನೇಕ ಸಚಿವರು, ಶಾಸಕರು, ಮುಖಂಡರು, ಕಾರ್ಯಕರ್ತರಲ್ಲಿ ಆತಂಕ ಶುರುವಾಗಿದೆ.

Advertisement

ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕ್ವಾರಂಟೆ„ನ್‌ಗೆ ಒಳಗಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಏ. 14ರಂದು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಮುಖ್ಯಮಂತ್ರಿಯವರನ್ನು ಸಚಿವರು, ಶಾಸಕರು ಬರಮಾಡಿಕೊಂಡಿದ್ದರು. ಎರಡು ದಿನಗಳ ಪ್ರವಾಸದಲ್ಲಿ ಸುಮಾರು 200ಕ್ಕೂ ಹೆಚ್ಚು ಮುಖಂಡರು ಮುಖ್ಯಮಂತ್ರಿಯ ಪ್ರಾಥಮಿಕ ಸಂಪರ್ಕಕಕ್ಕೆ ಬಂದಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ಬಾಳೇಕುಂದ್ರಿ ಕೆ.ಎಚ್‌. ಗ್ರಾಮದಲ್ಲಿ ಮುರೆಸಿದ್ದ ವಿಠ್ಠಲ ಹಾಗೂ ಸಂತ ಬಾಳುಮಾಮಾ ಮೂರ್ತಿ ಪ್ರತಿಷ್ಠಾಪನಾ, ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅನೇಕರು ಮುಖ್ಯಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಪ್ರಯಾಣದಿಂದ ಬಳಲಿದ್ದ ಮುಖ್ಯಮಂತ್ರಿಯವರಿಗೆ ಯುಕೆ-27 ಹೋಟೆಲ್‌ನಲ್ಲಿ ಬಿಮ್ಸ್‌ ಮತ್ತು ಕೆಎಲ್‌ಇ ಆಸ್ಪತ್ರೆ ವೈದ್ಯರು ತಪಾಸಣೆ ನಡೆಸಿ ಮಾತ್ರೆ ನೀಡಿದ್ದರು.

ಬೆಳಗಾವಿಯಿಂದ ನೇರವಾಗಿ ಸಿಎಂ ಗೋಕಾಕಕ್ಕೆ ತೆರಳಿದ್ದರು. ಮೂಡಲಗಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಅನೇಕ ಮುಖಂಡರು ಇದ್ದರು. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಸಂಜೆ ಗೋಕಾದಲ್ಲಿ ರೋಡ್‌ ಷೋ ನಡೆಸಿದ್ದರು. ಬಳಿಕ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದರು.

ಜ್ವರದಿಂದ ಬಳಲುತ್ತಿದ್ದ ಮುಖ್ಯಮಂತ್ರಿಯವರಿಗೆ ಏ. 14ರಂದು ರಾತ್ರಿ ಹೊಟೇಲ್‌ನಲ್ಲಿಯೇ ವೈದ್ಯರು ತಪಾಸಣೆ ನಡೆಸಿದ್ದರು. ಏ. 15ರಂದು ಬೆಳಗ್ಗೆ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿತ್ತು. ಅಂದು ಜಿಲ್ಲೆಯ ಹಿರಿಯ ಅಧಿ  ಕಾರಿಗಳು ಬಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದರು. ಏ. 15ರಂದು ಬೆಳಗ್ಗೆ 10:30ಕ್ಕೆ ನಾಗನೂರು ರುದ್ರಾಕ್ಷಿ ಮಠದ ಕಾರ್ಯಕ್ರಮ ಮತ್ತು ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಧನ್ವಂತರಿ, ಸುದರ್ಶನ ಹೋಮ-ಹವನದಲ್ಲಿ ಭಾಗವಹಿಸಿದ್ದರು. ಸುಮಾರು 70ಕ್ಕೂ ಹೆಚ್ಚು ಸ್ವಾಮೀಜಿಗಳು ಅಲ್ಲಿ ಭಾಗವಹಿಸಿದ್ದರು. ಅಲ್ಲಿ ಮಹಿಳೆಯರು, ಚಿಕ್ಕ ಮಕ್ಕಳು, ಕೆಲ ನಾಯಕರು ಕೂಡ ಬಂದಿದ್ದರು.

ಆಯಾಸದಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಜ್ವರದಲ್ಲಿಯೂ ಬೆಳಗಾವಿ ನಗರದ ದಕ್ಷಿಣ ಮತಕ್ಷೇತ್ರದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ನಗರದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನವನದಲ್ಲಿ ಪ್ರತಿಮೆಗೆ ಪೂಜೆ ಸಲ್ಲಿಸಿ ರೋಡ್‌ ಷೋ ಆರಂಭಿಸಿದ್ದರು. ಬಿಸಿಲಿನ ತಾಪದಿಂದ ಜ್ವರ-ಸುಸ್ತು ಬಂದು ರೋಡ್‌ ಷೋ ಅರ್ಧಕ್ಕೆ ಮೊಟಕುಗೊಳಿಸಿ ಹೋಟೆಲ್‌ ಗೆ ವಾಪಸ್ಸಾಗಿದ್ದರು. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬೆಂಗಳೂರಿಗೆ ಮರಳಿದ್ದರು. ಹೀಗಾಗಿ ಅಂದು ಸಂಜೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರೊಂದಿಗೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next