Advertisement

ಸಿಎಂ ವಿರುದ್ಧ ಸಿ.ಟಿ. ರವಿ ವಾಗ್ಧಾಳಿ

06:35 AM Mar 23, 2018 | Team Udayavani |

ಬೆಂಗಳೂರು:ಚಿಕ್ಕಮಗಳೂರಿನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ನನ್ನನ್ನು ಲೂಟಿ ರವಿ ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾಮುಂಡಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಿ ನಾನು ಮಾಡಿದ ಲೂಟಿ ಸಾಬೀತುಪಡಿಸಬೇಕು ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಶಾಸಕ ಸಿ.ಟಿ. ರವಿ ಎಚ್ಚರಿಕೆ ನೀಡಿದ್ದಾರೆ.

Advertisement

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನನ್ನು “ಸಿ.ಟಿ.ರವಿ ಅಲ್ಲ, ಲೂಟಿ ರವಿ’ ಎಂದು ಹೇಳುವ ಮೂಲಕ ಮುಖ್ಯಮಂತ್ರಿಯವರು ಚಿಕ್ಕಮಗಳೂರು ಕ್ಷೇತ್ರದ ಜನರಿಗೆ ಅಪಮಾನ ಮಾಡಿದ್ದಾರೆ. ಈ ಆರೋಪ ಸಾಬೀತುಪಡಿಸಲಿ ಇಲ್ಲದಿದ್ದರೆ, ಸಾರ್ವಜನಿಕವಾಗಿ ಕ್ಷಮೆ ಕೇಳಲಿ. ಎರಡೂ ಮಾಡದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗಿ. ಈ ಬಗ್ಗೆ ಈಗಾಗಲೇ ವಕೀಲರೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.

ಚಿಕ್ಕಮಗಳೂರು ಒಂದು ಸಣ್ಣ ಕ್ಷೇತ್ರ ನಾನು ಅಲ್ಲಿನ ಶಾಸಕ. ಕ್ಷೇತ್ರದ ಶಾಸಕನಾಗಿ ನಾನು ಯಾವುದೇ ವರ್ಗಾವಣೆ ದಂಧೆ ಅಥವಾ ಪರ್ಸಂಟೇಜ್‌ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರ ಚಿಕ್ಕಮಗಳೂರು ಪ್ರವಾಸವನ್ನು ಟೀಕಿಸಿದ ಸಿ.ಟಿ. ರವಿ, ಕಾಂಗ್ರೆಸ್‌ ಯುವರಾಜ ಚಿಕ್ಕಮಗಳೂರಿಗೆ ಬಂದು ತಮ್ಮ ಅಜ್ಜಿ ಇಂದಿರಾಗಾಂಧಿಯವರನ್ನು ನೆನಪಿಸಿಕೊಂಡಿದ್ದಾರೆ. ಆದರೆ, ಅಜ್ಜಿಗೆ ರಾಜಕೀಯ ಪುನರ್ಜಜನ್ಮ ಕೊಟ್ಟ ಕ್ಷೇತ್ರದ ಜನತೆಗೆ ಕಾಂಗ್ರೆಸ್‌ ಪಕ್ಷ ಕೊಟ್ಟಿದ್ದೇನು? ಅಜ್ಜಿ ಹೇಳಿದ ರೈಲು ಬರಲು 40 ವರ್ಷ ಬೇಕಾಯಿತು. ಅಧಿಕಾರ ಇದ್ದಾಗ ಇಟಲಿ ನೆನಪಾಗುವ ರಾಹುಲ್‌ಗಾಂಧಿಗೆ ಅಧಿಕಾರ ಇಲ್ಲದಾಗ ಚಿಕ್ಕಮಗಳೂರು ನೆನಪಾಗಿದೆ. ಹಿಂದೂ ಧರ್ಮ ಒಡೆಯುವ ಕೆಲಸ ಮಾಡಬೇಡಿ ಎಂದು ಶೃಂಗೇರಿ ಜಗದ್ಗುರುಗಳು ಕೊಟ್ಟಿರುವ ಎಚ್ಚರಿಕೆಯ ಆಶಿರ್ವಾದ ಅಲ್ಲೇ ಬಿಟ್ಟು ಹೋಗಬೇಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next