ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರು ದಿನೇ ದಿನೆ ಕಾಂಗ್ರೆಸ್‌ನತ್ತ ವಾಲುತ್ತಿದ್ದು, “ಬಿಜೆಪಿಯ ಜತೆಗಿದ್ದೇನೆ’ ಎನ್ನುತ್ತಲೇ ಒಂದು ಕಾಲನ್ನು ಪಕ್ಷದಿಂದ ಹೊರಗಿಟ್ಟಿದ್ದಾರೆಯೇ? ರವಿವಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಈ ಅನುಮಾನಗಳಿಗೆ ಪುಷ್ಟಿ ನೀಡಿದೆ.
ತಾನು ಬಿಜೆಪಿಯಲ್ಲಿ ಇರುವುದರಿಂದ ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದ ಸೋಮಶೇಖರ್, ತಾನು ಪಕ್ಷ ಬಿಡುವುದನ್ನೇ ಹಲವರು ಕಾಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸ್ಥಳೀಯ ಬಿಜೆಪಿ ನಾಯಕರು ಯತ್ನಿಸಿದ್ದಾಗಿಯೂ ಆರೋಪಿಸಿದ್ದರು.
ಈ ವೇಳೆ ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ದೂರು ಕೂಡ ನೀಡಿದ್ದರು. ಇದರ ಆಧಾರದ ಮೇಲೆ ಯಶವಂತಪುರ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಸಿ.ಎಂ. ಮಾರೇಗೌಡ ಹಾಗೂ ಹಾಲಿ ಉಪಾಧ್ಯಕ್ಷ ಧನಂಜಯ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ.
ಇದರ ಬೆನ್ನಲ್ಲೇ ರವಿವಾರ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿರುವ ಸೋಮಶೇಖರ್, ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವುದೂ ಸೇರಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ ತೊರೆಯುವ ಸಿದ್ಧತೆಯಲ್ಲಿರುವ ಸೋಮಶೇಖರ್ ಅವರಿಗಾಗಿ ಇಬ್ಬರನ್ನು ಉಚ್ಚಾಟಿಸಿರುವುದು ಪಕ್ಷದೊಳಗೆ ಚರ್ಚೆ ಹುಟ್ಟುಹಾಕಿದೆ.
ಗೊತ್ತಿದ್ದೋ ಗೊತ್ತಿಲ್ಲದೆಯೋ ಪಕ್ಷ ವಿರೋಧಿ ಚಟುವಟಿಕೆ ಮಾಡಿರುತ್ತಾರೆ. ಈ ಬಗ್ಗೆ ದೂರುಗಳು ಇದ್ದವು. ಅದನ್ನು ರಾಜ್ಯ ಶಿಸ್ತು ಸಮಿತಿಗೆ ಕಳುಹಿಸಲಾಗಿತ್ತು. ಸಮಿತಿಯು ಪರಿಶೀಲಿಸಿ ಇಬ್ಬರನ್ನು ಉಚ್ಚಾಟಿಸುವ ನಿರ್ಣಯ ಕೈಗೊಂಡಿದೆ.
– ಬಿ. ನಾರಾಯಣ, ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷ