ಚಾಮರಾಜನಗರ: ಮುಖ್ಯಮಂತ್ರಿಯವರು ಜಿಲ್ಲೆಗೆ ಡಿಸೆಂಬರ್ ಮೊದಲ ವಾರದಲ್ಲಿ ಆಗಮಿಸಿ ನೆರವೇರಿಸಲಿರುವ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಮುಖ್ಯಮಂತ್ರಿಯವರ ಜಿಲ್ಲೆಯ ಭೇಟಿ ಹಿನ್ನೆಲೆಯಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಎಂ ಜಿಲ್ಲೆಗೆ ಡಿಸೆಂಬರ್ ಮೊದಲ ವಾರ ಭೇಟಿ ನೀಡಲಿದ್ದಾರೆ. ಚಾಮರಾಜನಗರ ಪಟ್ಟಣ, ಹನೂರಿನಲ್ಲಿ ಕಾರ್ಯಕ್ರಮ ಏರ್ಪಟಾಗಿದ್ದು, ಬಳಿಕ ಸಿಎಂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತಾ ಕ್ರಮಗಳನ್ನು ವಹಿಸುವಂತೆ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಕೊಳ್ಳೇಗಾಲದಿಂದ ಹನೂರುವರೆಗೆ ಕೆಶಿಪ್ ಯೋಜನೆಯಡಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ವೇಗ ನೀಡಿ ಎಲ್ಲಿಯೂ ಅಡಚಣೆ ಆಗದಂತೆ ರಸ್ತೆ ಕಾಮಗಾರಿ ನಿರ್ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಯೋಜನಾ ವರದಿ ಸಿದ್ಧ: ಜಿಲ್ಲೆಯ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು 1400 ಕೋಟಿ ರೂ. ವೆಚ್ಚದಲ್ಲಿ ವಿಸೃತ ಯೋಜನಾ ವರದಿ ಸಿದ್ಧವಾಗಿದೆ. ಎರಡು ಹಂತಗಳಲ್ಲಿ ಯೋಜನೆ ಕೈಗೊಳ್ಳುವ ಸಂಬಂಧ ಅಗತ್ಯ ಪ್ರಕ್ರಿಯೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಮುಂದಾಗಿದ್ದೇವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಎಸ್ಪಿ ಟಿ.ಪಿ. ಶಿವಕುಮಾರ್, ಎಡೀಸಿ ಎಸ್. ಕಾತ್ಯಾಯಿನಿದೇವಿ, ಎಎಸ್ಪಿ ಕೆ.ಎಸ್.ಸುಂದರ್‌ರಾಜ್, ಹಿರಿಯ ಅರಣ್ಯ ಅಧಿಕಾರಿಗಳಾದ ಡಾ.ಸಂತೋಷ್ ಕುಮಾರ್, ದೀಪಾ ಉಪಸ್ಥಿತರಿದ್ದರು.