Advertisement
ನ.25-26ರಂದು ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದು 1 ವರ್ಷವಾದರೂ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಯಡಿಯೂರಪ್ಪ ಭೇಟಿ ನೀಡಿಲ್ಲ. ಕಳೆದ ಬಾರಿ ಸಿಎಂ ಆಗಿದ್ದಾಗಲೂ ಬಂದಿರಲಿಲ್ಲ.ಈ ಬಾರಿಯಾದರೂ ಭೇಟಿ ನೀಡುತ್ತಾರೆ ಎಂದು ಜನತೆ ನಿರೀಕ್ಷಿಸಿದ್ದಾರೆ. ಆದರೆ ಮಲೆ ಮಹದೇಶ್ವರ ಬೆಟ್ಟದ ಭೇಟಿ ಪ್ರವಾಸದಲ್ಲಿ ಜಿಲ್ಲಾಕೇಂದ್ರದಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದಿರುವುದನ್ನು ಗಮನಿಸಿದರೆ ಈಅವಧಿಯಲ್ಲೂ ಅವರು ಚಾ.ನಗರಕ್ಕೆ ಬರುವ ಸಾಧ್ಯತೆ ಕಡಿಮೆಯೆಂದೇ ಪ್ರತಿಪಕ್ಷಗಳು ಟೀಕಿಸುತ್ತಿವೆ.
Related Articles
Advertisement
ಜಿಲ್ಲೆಯ ಬಿಜೆಪಿ ಮುಖಂಡರು ಶಾಸಕರು ಯಡಿ ಯೂರಪ್ಪನವರ ಮನವೊಲಿಸಿ, ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆಗಾಗಿ ಯಡಿಯೂರಪ್ಪನವರನ್ನು ಕರೆಸಬೇಕೆಂದು ಜನತೆ ಒತ್ತಾಯಿಸಿದ್ದಾರೆ.
ಚಾ.ನಗರಕ್ಕೆ ಬಾರದ ಮುಖ್ಯಮಂತ್ರಿಗಳಿವರು : ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಭೇಟಿ ನೀಡಿದರೆ 6 ತಿಂಗಳೊಳಗೆ ಅಧಿಕಾರಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಪ್ರಚಲಿತದಲ್ಲಿತ್ತು. ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು, ಆರ್. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್. ಆರ್. ಬೊಮ್ಮಾಯಿ ಹಾಗೂ ವೀರೇಂದ್ರ ಪಾಟೀಲ್ ಇಲ್ಲಿಗೆ ಭೇಟಿ ನೀಡಿದ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಂಡರು
ಎಂದು ಕೆಲವರು ಕಾಲಹರಣಕ್ಕಾಗಿ ಕಟ್ಟೆಯಲ್ಲಿ ಕುಳಿತು ಮಾತನಾಡಿದ ಹರಟೆ ರಾಜಕೀಯ ವಲಯದಲ್ಲಿ ಹರಡಿ, ಬೆಂಗಳೂರು ತಲುಪಿತು. 1990ರಲ್ಲಿ ವೀರೇಂದ್ರ ಪಾಟೀಲರು ಏಕಾಏಕಿ ಅಧಿಕಾರ ಕಳೆದುಕೊಂಡು ಬಂಗಾರಪ್ಪನವರು ಮುಖ್ಯಮಂತ್ರಿಯಾದ ನಂತರವಂತೂ ಮುಖ್ಯಮಂತ್ರಿಗಳ ಅಧಿಕಾರ ಹೋಗಲು ಚಾಮರಾಜನಗರವೇ ಕಾರಣ ಎಂದು ವಿಲನ್ ಮಾಡಲಾಯಿತು. ಮೂಢನಂಬಿಕೆಗಳಿಗೆ ಬೆಲೆ ಕೊಡುವ ರಾಜಕೀಯ ವಲಯದಲ್ಲಿ ಇದನ್ನು ಬಲವಾಗಿ ನಂಬಲಾಯಿತು. ಅನಂತರ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್. ಎಂ. ಕೃಷ್ಣ, ಧರಂ ಸಿಂಗ್ ಚಾ.ನಗರಕ್ಕೆ ಭೇಟಿ ನೀಡಲಿಲ್ಲ. ಸಮಾಜವಾದಿ ಎನಿಸಿಕೊಂಡ ಪಟೇಲ್ ಅವರು ಸಹ ನೂತನ ಚಾ.ನಗರ ಜಿಲ್ಲೆಯನ್ನು ಮಹದೇಶ್ವರ ಬೆಟ್ಟದಲ್ಲಿ ಉದ್ಘಾಟಿಸಿದರು. 17 ವರ್ಷಗಳ ಬಳಿಕ, ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಪಟ್ಟಣಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಅಧಿಕಾರ ಹಂಚಿಕೆ ಒಡಂಬಡಿಕೆ
ವಿವಾದದಿಂದ ಅವರು ಅಧಿಕಾರ ಕಳೆದುಕೊಂಡರು. ಬಳಿಕ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಪಟ್ಟಣಕ್ಕೆ ಬರಲೇ ಇಲ್ಲ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಕೊನೆಯ ದಿನಗಳಲ್ಲಿ 2 ಬಾರಿ ಭೇಟಿ ನೀಡಿದ್ದರು. ನಂತರ ಸಿದ್ದರಾಮಯ್ಯ 11 ಬಾರಿ ಭೇಟಿ ನೀಡಿದ್ದರು.
ನಾವು 21ನೇ ಶತಮಾನದಲ್ಲಿದ್ದೇವೆ. ಆಡಳಿತಗಾರರಿಗೆ ವೈಜ್ಞಾನಿಕ ಚಿಂತನೆ ಬಹಳ ಮುಖ್ಯ. ಯಾವುದೋ ಮೂಢನಂಬಿಕೆಗೆ ಹೆದರಿ ಯಡಿಯೂರಪ್ಪನವರು ಚಾಮರಾಜನಗರಕ್ಕೆ ಬಾರದೇ ಇರಬಾರದು.ಕಳೆದ ಅವಧಿಯಲ್ಲಿ ಸಿಎಂ ಆಗಿದ್ದಾಗ ಅವರು ಚಾಮ ರಾಜನಗರಕ್ಕೆ ಬರಲಿಲ್ಲ. ಈ ಅವಧಿಯಲ್ಲಾದರೂ ಭೇಟಿ ನೀಡಿ ಅಭಿವೃದ್ದಿಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕು. –ಆರ್. ಧ್ರುವನಾರಾಯಣ, ಮಾಜಿ ಸಂಸದ
ಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿಕಾರ್ಯಗಳಿಗೆ ಚಾಲನೆ ನೀಡಲು ಬರುತ್ತಿದ್ದಾರೆ. ಚಾಮರಾಜನಗರಕ್ಕೆ ಬರುವುದಿಲ್ಲ ಎಂದೇನೂ ಅವರು ಹೇಳಿಲ್ಲ. ಸಂದರ್ಭ ಬಂದಾಗ ಅವರು ಖಂಡಿತ ಚಾಮರಾಜನಗರಕ್ಕೆ ಬರುತ್ತಾರೆ. ಅಭಿವೃದ್ಧಿಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾರೆ. -ಸಿ.ಎಸ್. ನಿರಂಜನ್‌ಕುಮಾರ್, ಶಾಸಕ, ಗುಂಡ್ಲುಪೇಟೆ
–ಕೆ.ಎಸ್.ಬನಶಂಕರಆರಾಧ್ಯ