Advertisement

ಬೆಂಗಳೂರಿಗೆ ಸರಬರಾಜಾಗುವ ಪಂಪ್ ಹೌಸ್ ಗೆ ನುಗ್ಗಿದ ನೀರು: ಸಿಎಂ ಪರಿಶೀಲನೆ

07:33 PM Sep 05, 2022 | Team Udayavani |

ಮಂಡ್ಯ: ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ  ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಮಳೆ ನೀರು ತುಂಬಿ ಹಾನಿಯಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತಿ ಹೆಚ್ಚು ಮಳೆಯಿಂದ ಟಿ.ಕೆ.ಹಳ್ಳಿಯ ಪಂಪ್ ಹೌಸ್ ಬಳಿಯ ಭೀಮೇಶ್ವರ ನದಿಯು ಹಾಗೂ ಕೆರೆ ತುಂಬಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎರಡು ಪಂಪ್ ಹೌಸ್ ಗೆ ನುಗ್ಗಿ ಬಹಳ ಹಾನಿಯಾಗಿದೆ ಎಂದು ತಿಳಿಸಿದರು.

ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಭೀಮೇಶ್ವರ ನದಿ ಉಕ್ಕಿ ಹರಿದಿದೆ. ನದಿ ನೀರು ಹೆಚ್ಚಾಗಿ ನೀರು ಸರಬರಾಜು ಘಟಕಕ್ಕೆ ನುಗ್ಗಿದೆ. 75 ವರ್ಷದ ಬಳಿಕ ಈ ನದಿಯಲ್ಲಿ ಇಷ್ಟು ಪ್ರಮಾಣದ ನೀರು ಬಂದಿದೆ. 5 ಘಟಕಗಳ ಪೈಕಿ 2 ಪಂಪ್ ಹೌಸ್ ಗಳಿಗೆ ನೀರು ನುಗ್ಗಿದೆ ಎಂದರು.

1450 ಎಂಎಲ್ ಡಿ ಸಾಮರ್ಥ್ಯದ ಪಂಪ್ ಹೌಸ್ಗಳಿದ್ದು, 550 ಮತ್ತು 350 ಎಂಎಲ್ ಡಿ ಸಾಮರ್ಥ್ಯದ ಘಟಕಗಳಿದ್ದು, 550 ಎಂಎಲ್ ಡಿ ಸಾಮರ್ಥ್ಯದ ಪಂಪ್ ಹೌಸ್ ಗಳು ಈಗಾಗಲೇ ಕೆಲಸ ಮಾಡುತ್ತಿದ್ದು, ನೀರು ಬೆಂಗಳೂರಿಗೆ ನಿರಂತರವಾಗಿ ಸರಬರಾಜು ಆಗುತ್ತಿದೆ ಎಂದು ತಿಳಿಸಿದರು.

ನೀರು ತುಂಬಿದ ಎರಡು ಪಂಪ್ ಹೌಸ್ ಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಸ್ಟೇಜ್ 4 ಪಂಪ್ ಹೌಸ್ ನಲ್ಲಿ 12 ಅಡಿ ನೀರು ಹೊರ ತೆಗೆಯಲಾಗಿದೆ. ಇನ್ನೂ 11 ಅಡಿ ನೀರು ತೆಗೆಯಬೇಕು. ಮಧ್ಯರಾತ್ರಿ ಅಥವಾ ನಾಳೆ ಬೆಳಿಗ್ಗೆ ಒಳಗೆ ಈ ಕಾರ್ಯ ಮುಗಿಯಲಿದೆ ಎಂದು ಹೇಳಿದರು.

Advertisement

ಯಂತ್ರೋಪಕರಣಗಳನ್ನು ಡ್ರೈ ಮಾಡಿದ ಬಳಿಕ 350 ಎಂಎಲ್ ಡಿ ನೀರನ್ನು ಸರಬರಾಜು ಮಾಡಲಾಗುತ್ತದೆ. ಇದರಿಂದ ಮತ್ತಷ್ಟು ನೀರನ್ನು ಬೆಂಗಳೂರಿಗೆ ಒದಗಿಸಲು ಸಾಧ್ಯವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಪಂಪ್ ಹೌಸ್ ಸುತ್ತಾ ಕಾಂಕ್ರೀಟ್ ತಡೆಗೋಡೆ ಮಾಡಲಾಗುವುದು.  ಮಳೆ ನಿರಂತರವಾಗಿ ಸುರಿಯುತ್ತಿದೆ. ರಾಜ್ಯದ ಎಲ್ಲಾ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಮಳೆ ನೀರು, ಕೆರೆ ನೀರು ಒಟ್ಟಾಗಿ ಹರಿದು ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆ ಜಾಗ್ರತೆ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇದಕ್ಕೂ ಮುನ್ನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ, ಆರ್.ಆಶೋಕ್, ಬೈರತಿ ಬಸವರಾಜು, ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಪೊಲೀಸ್ ವರಿಷ್ಠಾಧಿಕಾರಿ ಎಸ್.ಯತೀಶ್ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next