Advertisement

ಕನ್ನಡ ಇಲ್ಲದ ಗ್ರಾಮದಲ್ಲಿ ವಾಸ್ತವ್ಯ

11:05 PM Jun 26, 2019 | Lakshmi GovindaRaj |

ಬಸವಕಲ್ಯಾಣ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಗುರುವಾರ ಗಡಿ ತಾಲೂಕಿನ ಕುಗ್ರಾಮ ಉಜಳಂಬದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಇದಕ್ಕಾಗಿ ಉಜಳಂಬ ಗ್ರಾಮ ಸಿಂಗಾರಗೊಂಡಿದೆ. ಪ್ರಥಮ ಬಾರಿಗೆ ಆಗಮಿಸುತ್ತಿರುವ ಸಿಎಂ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ ಮತ್ತು ಕನ್ನಡವೇ ಗೊತ್ತಿಲ್ಲದ ಉಜಳಂಬ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ವಿಶೇಷ. ಮಾನ್ವಿ ತಾಲೂಕು ಕರೇಗುಡ್ಡ ಗ್ರಾಮದಿಂದ ರಸ್ತೆ ಮೂಲಕ ಉಜಳಂಬ ಗ್ರಾಮಕ್ಕೆ ಗುರುವಾರ ಬೆಳಗ್ಗೆ 10ಕ್ಕೆ ಆಗಮಿಸಲಿದ್ದು, ಮೊದಲಿಗೆ ಜನತಾ ದರ್ಶನ ನಡೆಸಿ, ಜನರ ಕುಂದು ಕೊರತೆಗಳಿಗೆ ಸ್ಪಂದಿಸಲಿದ್ದಾರೆ.

ಮಧ್ಯಾಹ್ನ ಶಾಲಾ ಮಕ್ಕಳ ಜತೆಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಂಜೆ 6ಕ್ಕೆ ರೈತರೊಂದಿಗೆ ಮಾತುಕತೆ, ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ರಾತ್ರಿ ಶಾಲಾ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಭೋಜನ ಮಾಡಲಿದ್ದಾರೆ. ರಾತ್ರಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿ ಶುಕ್ರವಾರ ಬೆಳಗ್ಗೆ ಬೀದರ ವಾಯು ನೆಲೆ ಮೂಲಕ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳಲಿದ್ದಾರೆ.

ಸಿಎಂ ವಾಸ್ತವ್ಯ ಮಾಡುವ ಸರ್ಕಾರಿ ಶಾಲೆ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ 12 ಕೋಣೆಗಳನ್ನು ನೆಲಸಮ ಮಾಡಿ ಅವಶ್ಯಕತೆಗೆ ತಕ್ಕಂತೆ ಹೊಸ ಕೋಣೆ ನಿರ್ಮಿಸಲಾಗುತ್ತಿದೆ. ಮಳೆ ಬಂದರೂ ಸಾರ್ವಜನಿಕರಿಗೆ ಹಾಗೂ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಬೃಹತ್‌ ಪೆಂಡಾಲ್‌ ನಿರ್ಮಿಸಲಾಗಿದೆ.

ಸಾರ್ವಜನಿಕರು ಹಾಗೂ ಅಂಗವಿಕಲರಿಗೆ ಮನವಿ ಸಲ್ಲಿಸಲು ಪ್ರತ್ಯೇಕ 10 ಕೌಂಟರ್‌ ವ್ಯವಸ್ಥೆ ಮಾಡಲಾಗಿದೆ. ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಅವರು ಸಿಎಂ ಬರುವ ಮುನ್ನವೇ ಗ್ರಾಮೀಣ ಸಂತೆಗಾಗಿ 1 ಕೋಟಿ ರೂ. ಮಂಜೂರು ಮಾಡಿದ್ದು, ಸಿಎಂ ಅವರಿಂದಲೇ ಪಿಕೆಪಿಎಸ್‌ ಉದ್ಘಾಟನೆ ಮಾಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Advertisement

ಸಿಎಂಗೆ ತಟ್ಟಲಿದೆ ಪ್ರತಿಭಟನೆ ಬಿಸಿ
ಬೀದರ: ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲೂ ಸಿಎಂ ಕುಮಾರಸ್ವಾಮಿಗೆ ರೈತರ ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆ ಇದೆ. ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ವೇಳೆ ಸ್ಥಳದಲ್ಲಿಯೇ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಉಜಳಂಬ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next