Advertisement

CM ಗದ್ದಲ: ರಾಹುಲ್‌ಗೆ ದೂರು; 6 ಮಂದಿಯ ಸಿಎಂ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ

12:56 AM Sep 11, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿಗೆ ಬಿದ್ದಿರುವ ಕಾಂಗ್ರೆಸ್‌ನ ಕೆಲವು ನಾಯಕರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿರುವ ಹಲವು ಹಿರಿಯ ಮುಖಂಡರು, “ಪಕ್ಷಕ್ಕೆ ಮುಜುಗರ ಆಗುವಂತಹ ಹೇಳಿಕೆಗಳನ್ನು ನೀಡುತ್ತಿರುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವುದರ ಜತೆಗೆ ಇಂತಹ ವರ್ತನೆಗಳು ಪುನರಾವರ್ತನೆ ಆಗದಂತೆ ಸೂಚನೆ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

Advertisement

“ಸಿಎಂ ಕುರ್ಚಿಗೆ ಸಂಬಂಧಿಸಿ ಹಿರಿಯ ಸಚಿವರ ಸಹಿತ ಆರು ಮಂದಿ ಮುಖಂಡರು ನೀಡುತ್ತಿರುವ ಹೇಳಿಕೆಗಳು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡುತ್ತಿವೆ.

ಅಷ್ಟೇ ಅಲ್ಲ, ಈ ಅಂತಃಕಲಹ ಮತ್ತು ಬೇಜವಾಬ್ದಾರಿಯ ಹೇಳಿಕೆಗಳು ಸರಕಾರದ ಮೇಲೆ ಜನ ಮತ್ತು ಪಕ್ಷದ ಕಾರ್ಯಕರ್ತರು ನಂಬಿಕೆ ಹಾಗೂ ವಿಶ್ವಾಸ ಕಳೆದುಕೊಳ್ಳುವಂತೆಯೂ ಮಾಡಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭಾ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಅವರಿಗೆ ಹಿರಿಯ ನಾಯಕರು ದೂರು ನೀಡಿದ್ದಾರೆ.

ಮೇಲ್ಮನೆ ಸದಸ್ಯರಾದ ಮಂಜುನಾಥ ಭಂಡಾರಿ ಮತ್ತು ದಿನೇಶ್‌ ಗೂಳಿಗೌಡ ಒಂದು ದಿನದ ಹಿಂದೆ ಈ ಸಂಬಂಧ ಖರ್ಗೆ ಅವರಿಗೆ ಪತ್ರ ಬರೆದು, ಸಿಎಂ ಕುರ್ಚಿ ಬಗ್ಗೆ ಹೇಳಿಕೆ ನೀಡುತ್ತಿರುವ ನಾಯಕರ ವಿರುದ್ಧ ಕ್ರಮದ ಎಚ್ಚರಿಕೆ ನೀಡುವಂತೆ ಪತ್ರ ಬರೆದಿದ್ದರು. ಅದರ ಮುಂದುವರಿದ ಭಾಗವಾಗಿ ಮತ್ತೆ ಹಲವರು ಪತ್ರ ಬರೆದಿದ್ದಾರೆ. ಈ ಸಲ ಮಾಜಿ ಸಚಿವರಾದ ಬಿ.ಎಲ್‌. ಶಂಕರ್‌, ಎಚ್‌.ಎಂ. ರೇವಣ್ಣ, ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌, ಮಾಜಿ ಸಂಸದರಾದ ವಿ.ಎಸ್‌. ಉಗ್ರಪ್ಪ, ಬಿ.ಎನ್‌. ಚಂದ್ರಪ್ಪ, ಎಲ್‌. ಹನುಮಂತಯ್ಯ, ಮೇಲ್ಮನೆ ಸದಸ್ಯ ಪ್ರಕಾಶ್‌ ರಾಠೊಡ್‌, ಮೇಲ್ಮನೆ ಮಾಜಿ ಸದಸ್ಯ ಪಿ.ಆರ್‌. ರಮೇಶ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಸ್‌. ದ್ವಾರಕಾನಾಥ್‌, ಎಚ್‌.ಎಸ್‌. ಚಂದ್ರಮೌಳಿ, ಕಾನೂನು ಘಟಕದ ಅಧ್ಯಕ್ಷ ಎಚ್‌.ಡಿ. ಅಮರನಾಥ್‌, ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಖಾಲಿದ್‌ ಅಹಮದ್‌, ಪದಾಧಿಕಾರಿ ಮಹಬೂಬ್‌ ಪಾಷಾ ಸಹಿತ ಹಲವರು ಸಹಿಯೊಂದಿಗೆ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.

ಸಿಎಂ ಸ್ಥಾನದ ಬಗ್ಗೆ ಚರ್ಚೆ ಅನಗತ್ಯ. ಮುಖ್ಯಮಂತ್ರಿ ಆಗುತ್ತೀರಾ ಎಂದು ಮಾಧ್ಯಮದವರು ಕೇಳಿದಾಗ, ನಾವು ಬೇಡ ಎಂದು ಹೇಗೆ ಹೇಳಲಿ ಎಂಬುದಾಗಿ ಆ ಸ್ನೇಹಿತರು ನನಗೆ ತಿಳಿಸಿದ್ದಾರೆ. ಅಷ್ಟು ಬಿಟ್ಟರೆ, ಇದರಲ್ಲಿ ಬೇರೇನೂ ಇಲ್ಲ.
-ಡಾ| ಪರಮೇಶ್ವರ್‌, ಗೃಹಸಚಿವ

Advertisement

ಕಾಂಗ್ರೆಸ್‌ ಅತ್ಯಂತ ಶಿಸ್ತಿನ ಪಕ್ಷವಾಗಿದೆ. ಸಿಎಂ ಕುರ್ಚಿ ಬಗ್ಗೆ ಹಾದಿಬೀದಿಯಲ್ಲಿ ಚರ್ಚಿಸುವುದು ಸರಿಯಲ್ಲ. ಅದಕ್ಕಾಗಿ ನಾನು ಹೈಕಮಾಂಡ್‌ಗೆ ಪತ್ರ ಬರೆದಿದ್ದೇನೆ. ಆ ಮೂಲಕ ನನ್ನ ಅಭಿಪ್ರಾಯ ತಿಳಿಸಿದ್ದೇನೆ ಅಷ್ಟೆ. ಮತ್ತೂಬ್ಬರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ.
-ಮಂಜುನಾಥ ಭಂಡಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.