ಬೆಂಗಳೂರು :ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈಗ ನಾಟಿ ಚಿಕಿತ್ಸೆಗೆ ಶರಣಾಗಿದ್ದು, ವಿದೇಶಕ್ಕೆ ತೆರಳಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಪ್ರಸ್ತಾಪವನ್ನು ಕೈ ಬಿಟ್ಟಿದ್ದಾರೆ.
ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ ಟೇಕಲ್ ಅವರಿಂದ ಬೊಮ್ಮಾಯಿ ಚಿಕಿತ್ಸೆ ಪಡೆಯುವುದಕ್ಕೆ ಆರಂಭಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ ಸವದಿ ಅವರ ಜತೆಗೆ ಬೆಳಗಾವಿಯ ಗೆಸ್ಟ್ ಹೌಸ್ ನಲ್ಲಿ ಆರು ದಿನಗಳ ಹಿಂದೆಯೇ ಚಿಕಿತ್ಸೆ ಆರಂಭಿಸಲಾಗಿದೆ.
ನಾಟಿ ಚಿಕಿತ್ಸೆ ಆರಂಭಿಸಿದ ನಂತರ ಬೊಮ್ಮಾಯಿ ಅವರಿಗೆ ಮೊಣಕಾಲು ನೋವು ತುಸು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಬೊಮ್ಮಾಯಿ ಆಪ್ತ ಕಂದಾಯ ಸಚಿವ ಆರ್. ಅಶೋಕ ಕಳೆದ ವಾರವಷ್ಟೇ ಮುಖ್ಯಮಂತ್ರಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇದೀಗ ಬೊಮ್ಮಾಯಿ ನಾಟಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳು ಬಹಿರಂಗವಾಗಿದೆ.
ಕಳೆದ ಕೆಲ ತಿಂಗಳಿಂದ ಬೊಮ್ಮಾಯಿಯವರು ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದರು. ನಡೆದಾಡುವಾಗ ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ವಿದೇಶಕ್ಕೆ (ಸ್ವಿಜರ್ ಲ್ಯಾಂಡ್ )ಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆಂಬ ಸುದ್ದಿ ಹರಿದಾಡುತ್ತಿತ್ತು. ಆಪರೇಷನ್ ಬಳಿಕ ಮೂರರಿಂದ ನಾಲ್ಕು ತಿಂಗಳು ಬೆಡ್ ರೆಸ್ಟ್ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಬೊಮ್ಮಾಯಿ ಅವಧಿಗೆ ಮುನ್ನವೇ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಬಿಜೆಪಿ ಪಡಸಾಲೆಯಲ್ಲಿ ಹಬ್ಬಿತ್ತು.
ಕೆಲ ದಿನಗಳ ಹಿಂದೆ ಖುದ್ದು ಬೊಮ್ಮಾಯಿ ಅವರೇ ಈ ಸುದ್ದಿ ನಿರಾಕರಿಸಿದ್ದರು. ಈಗ ನಾಟಿ ಚಿಕಿತ್ಸೆ ಪೋಟೋ ಬಿಡುಗಡೆ ಮಾಡುವ ಮೂಲಕ ಸಿಎಂ ಬದಲಾವಣೆ ವದಂತಿಗೆ ತೆರೆ ಎಳೆಯುವ ಪ್ರಯತ್ನ ನಡೆದಿದೆ.