Advertisement

ಸರ್ಕಾರ ಉಳಿಸಲು ಸಿಎಂ ಕಸರತ್ತು

01:23 AM Jul 08, 2019 | Team Udayavani |

ಬೆಂಗಳೂರು: ವಿದೇಶ ಪ್ರವಾಸದಿಂದ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮೈತ್ರಿ ಸರ್ಕಾರ ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕರ ಜತೆ ತಡರಾತ್ರಿ ಗಂಭೀರ ಚರ್ಚೆ ನಡೆಸಿದರು. ಈಗಾಗಾಲೇ ರಾಜೀನಾಮೆ ನೀಡಿರುವ ಶಾಸಕರನ್ನು ಹೇಗಾದರೂ ಮಾಡಿ ವಾಪಸ್‌ ಕರೆತರುವ ಪ್ರಯತ್ನ ನಡೆಸುವ ಕುರಿತು ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಅವರನ್ನು ಮನವೊಲಿಸಿದರೆ, ಬೆಂಗಳೂರಿನ ಉಳಿದ ಶಾಸಕರು ವಾಪಸ್‌ ಬರುತ್ತಾರೆ. ಅವರ ಮನವೊಲಿಕೆ ಕಸರತ್ತು ನಡೆಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬೆಳವಣಿಗೆಯ ನಡುವೆಯೇ ಸೋಮವಾರ ಮುಂಬೈಗೆ ತೆರಳಲು ಸಿದ್ಧತೆ ನಡೆಸಿದ್ದರು ಎನ್ನಲಾದ ರಾಮಲಿಂಗಾ ರೆಡ್ಡಿ ಅವರನ್ನು ಭಾನುವಾರ ತಡ ರಾತ್ರಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಭೇಟಿ ಮಾಡಿ ಯಾವುದೇ ಕಾರಣಕ್ಕೂ ಮುಂಬೈಗೆ ತೆರಳದಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೂ ಕೂಡ ಮುಂಬೈಗೆ ತೆರಳದಂತೆ ಸಚಿವ ಡಿ.ಕೆ.ಶಿವಕುಮಾರ್‌ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಸೋಮವಾರ ಸಂಜೆ ವೇಳೆಗೆ ರಾಜೀನಾಮೆ ಸಲ್ಲಿಸಿರುವ ಶಾಸಕರನ್ನು ವಾಪಸ್‌ ಕರೆತರುವ ನಿಟ್ಟಿನಲ್ಲಿ ಮೈತ್ರಿ ಸರ್ಕಾರದ ನಾಯಕರು ಕಸರತ್ತು ನಡೆಸಲು ಸಿಎಂ ಸಭೆಯಲ್ಲಿ ನಿರ್ಣಯಿಸಲಾಗಿದೆ.

ರಾಜೀನಾಮೆ ನೀಡಿರುವ ಶಾಸಕರು ವಾಪಸ್‌ ಬಂದರೆ, ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆಯದಿದ್ದರೆ, ಮುಂದಿನ ನಡೆಯ ಬಗ್ಗೆ ಚರ್ಚಿಸೋಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

Advertisement

ರಿವರ್ಸ್‌ ಆಪರೇಷನ್‌ಗೆ ಸಿದ್ಧತೆ?: ಇನ್ನೊಂದೆಡೆ ಮೈತ್ರಿ ಪಕ್ಷಗಳ ಶಾಸಕರನ್ನು ಆಪರೇಷನ್‌ ಕಮಲ ಮಾಡುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಮುಂದಾಗಿರುವ ಮೈತ್ರಿ ಪಕ್ಷಗಳ ನಾಯಕರು ರಿವರ್ಸ್‌ ಆಪರೇಷನ್‌ ಮಾಡಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಆಪರೇಷನ್‌ ಹಸ್ತ ನಡೆಸಲು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿಯ ಹತ್ತು ಶಾಸಕರನ್ನು ಸೆಳೆಯಲು ಮೈತ್ರಿ ಪಕ್ಷಗಳ ನಾಯಕರು ಕಸರತ್ತು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದ್ದು, ಈಗಾಗಲೇ ಕನಕಗಿರಿ ಶಾಸಕ ಬಸವರಾಜ್‌ ದಡೆಸಗೂರು, ಯಾದಗಿರಿಯ ವೆಂಕಟರೆಡ್ಡಿ ಮುದ್ನಾಳ್‌, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಹೊಸದುರ್ಗದ ಗೂಳಿಹಟ್ಟಿ ಶೇಖರ್‌ ಹಾಗೂ ಬೆಂಗಳೂರಿನ ಬೊಮ್ಮನಳ್ಳಿ ಶಾಸಕ ಸತೀಶ್‌ ರೆಡ್ಡಿಗೆ ಕಾಂಗ್ರೆಸ್‌ ನಾಯಕರು ಆಪರೇಷನ್‌ ಹಸ್ತ ಮಾಡಲು ಗಾಳ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೊನ್ನೆಟ್‌ ವಿಮಾನದಲ್ಲಿ ಆಗಮಿಸಿದ ಸಿಎಂ: ಅಮೆರಿಕದಿಂದ ಭಾನುವಾರ ನವದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಂದಾಲ್‌ ಜತೆಗಿನ ಪಾಲುದಾರಿಕೆ ಸಂಸ್ಥೆ ಮೊನ್ನೆಟ್‌ಗೆ ಸೇರಿದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಡಿಸಿಎಂ ಉಪಾಹಾರ ಕೂಟ: ಮೈತ್ರಿ ಸರ್ಕಾದಲ್ಲಿ ರಾಜೀನಾಮೆ ಪರ್ವ ಜೋರಾಗುತ್ತಿದ್ದಂತೆ ಪಕ್ಷದ ಸಚಿವರಲ್ಲಿ ಒಗ್ಗಟ್ಟು ಪ್ರದರ್ಶಿಸಲು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೋಮವಾರ ಉಪಹಾರ ಕೂಟ ಏರ್ಪಡಿಸಿದ್ದಾರೆ.

ಈಗಾಗಲೇ ಬಿಜೆಪಿಯವರು ಕಾಂಗ್ರೆಸ್‌ನ ಸಚಿವರಿಗೂ ಗಾಳ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಪಕ್ಷದ ಸಚಿವರ ಒಗ್ಗಟ್ಟು ಪ್ರದರ್ಶಿಸಲು ಈ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಒಂದು ವೇಳೆ, ಅತೃಪ್ತ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ಪರಿಸ್ಥಿತಿ ನಿರ್ಮಾಣವಾದರೆ, ಪಕ್ಷ ಹಾಗೂ ಸರ್ಕಾರ ಉಳಿಸಿಕೊಳ್ಳಲು ಸಚಿವರು ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧರಾಗಬೇಕು ಎನ್ನುವ ಸೂಚನೆಯನ್ನೂ ಈ ಸಭೆಯಲ್ಲಿ ನೀಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next