ಬೆಂಗಳೂರು : ಕೋವಿಡ್ ಸೋಂಕಿಗೆ ಒಳಗಾಗಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಹನ್ನೊಂದು ದಿನಗಳ ಬಳಿಕ ಅಧಿಕೃತ ಸರಕಾರಿ ನಿವಾಸಕ್ಕೆ ಆಗಮಿಸಿ ಕಡತ ವಿಲೇವಾರಿ ಆರಂಭಿಸಿದ್ದಾರೆ.
ರೇಸ್‌ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಬೊಮ್ಮಾಯಿ ಅಧಿಕಾರಿಗಳ ಜತೆಗೆ ಮೊದಲ ಸುತ್ತಿನ ಸಭೆ ನಡೆಸಿದರು. ಆ ಬಳಿಕ ದೈನಂದಿನ ಕಡತಗಳ ವಿಲೇವಾರಿ ನಡೆಸಿದರು. ಮಂಗಳವಾರ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಅವರು ನೆಗೆಟಿವ್ ವರದಿ ಬಂದ ನಂತರವೇ ಕರ್ತವ್ಯಕ್ಕೆ ಹಾಜರಾಗುವ ನಿರ್ಧಾರ ಕೈಗೊಂಡರು.
ಇದಕ್ಕೂ ಮುನ್ನ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ಹನ್ನೊಂದು ದಿನಗಳ ಕಾಲ ಮನೆಯಲ್ಲಿ ಕುಳಿತ ಉದಾಹರಣೆಯೇ ಇರಲಿಲ್ಲ. ಕೋವಿಡ್ ಕಾರಣಕ್ಕಾಗಿ ಮನೆಯಲ್ಲಿ ಇರಬೇಕಾಯಿತು. ಆದರೆ ವರ್ಚ್ಯುವಲ್ ಮೂಲಕ ಎಲ್ಲ ಪ್ರಮುಖ ಸಭೆಗಳಿಗೂ ಹಾಜರಾಗಿದ್ದೇನೆ. ಕೋವಿಡ್ ಇದ್ದರೂ ದೈನಂದಿನ ವಿದ್ಯಮಾನಗಳಿಂದ ದೂರವಾಗಿರಲಿಲ್ಲ ಎಂದು ಹೇಳಿದರು.
ಪರಾಮರ್ಶೆ
ವಾರಾಂತ್ಯದ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಸಡಿಲಿಸುವಂತೆ ಸಾಕಷ್ಟು ಜನರು ಮನವಿ ಸಲ್ಲಿಸಿದ್ದಾರೆ. ಆದರೆ ಶುಕ್ರವಾರ ನಡೆಯುವ ಸಭೆಯಲ್ಲಿ ತಜ್ಞರ ಜತೆ ಚರ್ಚೆ ನಡೆಸಿಯೇ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಈ ಅಲೆ ಅಷ್ಟೊಂದು ತೀವ್ರವಾಗಿಲ್ಲ. ಸಾಮಾನ್ಯ ಜ್ವರದಂತೆ ಬಂದು ಹೋಗುತ್ತದೆ. ಹೀಗಾಗಿ ಕೋವಿಡ್ ನಿಯಮ ಪಾಲನೆಯೊಂದಿಗೆ ದೈನಂದಿನ ಚಟುವಟಿಕೆ ನಡೆಸಬಹುದೆಂದೂ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ತಜ್ಞರ ಜತೆ ಪರಾಮರ್ಶೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.