ಹೊಸಪೇಟೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿ ಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲಿಡುವ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ಡಾ| ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಹೈ-ಕ ಭಾಗಕ್ಕೆ 371 ಜೆ ಜಾರಿಗೊಳಿಸಿ ಶೈಕ್ಷಣಿಕ, ಉದ್ಯೋಗ ಸೇರಿದಂತೆ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದೆ. ಹೈ-ಕ ಭಾಗಕ್ಕೆ ಬಿಜೆಪಿ ಸರಕಾರದ ಕೊಡುಗೆ ಏನೂ ಇಲ್ಲ. ಹೈದರಾಬಾದ್ ಕರ್ನಾಟಕ ಹೆಸರನ್ನು ತೆಗೆದು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡಿದ್ದೇ ಸಾಧನೆ ಎಂದರು.
ನೀರಾವರಿ ಯೋಜನೆಗಳಿಗೆ 150 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದ ಬಿಜೆಪಿ ಸರಕಾರ ಎಷ್ಟು ಖರ್ಚು ಮಾಡಿದೆ. ಅವರಿಗೆ 45 ಸಾವಿರ ಕೋಟಿ ರೂ. ಕೂಡ ಖರ್ಚು ಮಾಡಲು ಸಾಧ್ಯವಾಗಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ಅವ ಧಿಯಲ್ಲಿ 100 ಸಾವಿರ ಕೋಟಿ ರೂ. ನೀರಾವರಿಗೆ ಮೀಸಲಿಟ್ಟಿತ್ತು. ಅದರಲ್ಲಿ 50 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಈಗ ಮತ್ತೂಮ್ಮೆ ಅಧಿಕಾರ ಬಂದರೆ ನೀರಾವರಿಗೆ 2 ಲಕ್ಷ ಕೋಟಿ ರೂ. ಮೀಸಲಿಡಲಾಗುವುದು ಎಂದರು.
ಬಿಜೆಪಿ ಸುಳ್ಳಿನ ಫ್ಯಾಕ್ಟರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರೀ ಸುಳ್ಳು ಹೇಳುತ್ತಾರೆ. ಬಿಜೆಪಿ ಸುಳ್ಳನ್ನು ಉತ್ಪಾದನೆ ಮಾಡುವ ಫ್ಯಾಕ್ಟರಿ ಇದ್ದಂತೆ. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ 600 ಭರವಸೆಗಳಲ್ಲಿ ಕನಿಷ್ಟ ಶೇ.10ರಷ್ಟು ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಆದರೆ ಕಾಂಗ್ರೆಸ್ ಕೊಟ್ಟ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದೆ ಎಂದರು.
Related Articles
ಚರ್ಚೆಗೆ ಆಹ್ವಾನ
ಸಿಎಂ ಬಸವರಾಜ ಬೊಮ್ಮಾಯಿ 3.5 ವರ್ಷ ಅವಧಿಯಲ್ಲಿ ಬಿಜೆಪಿ ಸರಕಾರ ಮಾಡಿರುವ ಸಾಧನೆಗಳು ಏನು? ಅವರಿಗೆ ಧಮ್ ಇದ್ದರೆ, ತಾಕತ್ತು ಇದ್ದರೆ, ಅಭಿವೃದ್ಧಿ ಕುರಿತು ಸಾರ್ವಜನಿಕ ಚರ್ಚೆಗೆ ಬರಲಿ. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ರಾಜ್ಯದ ಎಲ್ಲ ಜಾತಿ-ಧರ್ಮದ ಬಡಜನರಿಗೆ ಅನ್ನಭಾಗ್ಯ ಯೋಜನೆ ಮೂಲಕ ಪ್ರತಿಯೊಬ್ಬರಿಗೂ 7 ಕೆ.ಜಿ. ಅಕ್ಕಿಯನ್ನು ನೀಡಲಾಗಿತ್ತು. ಬೊಮ್ಮಾಯಿ ಸರಕಾರ ಇದನ್ನು ಐದು ಕೆಜಿಗೆ ಇಳಿಸಿದೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುತ್ತೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಈಶ್ವರ ಖಂಡ್ರೆ ಮತ್ತಿತರರಿದ್ದರು.
ದೊಡ್ಡ ಭ್ರಷ್ಟಸರಕಾರ: ರಣದೀಪ್
ದೇಶದಲ್ಲಿ ಅತಿದೊಡ್ಡ ಭ್ರಷ್ಟ ಸರಕಾರ ಯಾವುದಾದರೂ ಇದ್ದರೆ ಅದು ಕರ್ನಾಟಕದ ಬಿಜೆಪಿ ಸರಕಾರ. ಬಿಜೆಪಿಯವರು ಹಣಕ್ಕಾಗಿ ಸ್ವಪಕ್ಷದವರನ್ನು ಕೂಡ ಬಿಡುವುದಿಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಆರೋಪಿಸಿದರು.
ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರೋದು 40 ಪರ್ಸೆಂಟ್ ಸರಕಾರ. 2,500 ಕೋಟಿಗೆ ಸಿಎಂ ಸ್ಥಾನ ಸೇಲ್ ಆಗಿದೆ ಎಂದು ಅವರದೇ ಪಕ್ಷದ ಯತ್ನಾಳ್ ಆರೋಪಿಸಿದ್ದಾರೆ. ಬಿಜೆಪಿ ಸಚಿವರು ಭ್ರಷ್ಟಾಚಾರಿಗಳೆಂದು ದೂರುತ್ತಾರೆ. ಒಂದೆಡೆ ಯೋಗೇಶ್ವರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಬ್ಬರು ಗೂಂಡಾ ಎಂದು ಹೇಳಿದ್ದಾರೆ. ಪಿಂಪ್ ಕೆಲಸ ಮಾಡುವ ಸ್ಯಾಂಟ್ರೋ ರವಿ ಸರಕಾರ ನಡೆಸುತ್ತಾರೆ. ಇದು ಬಿಜೆಪಿ ಸಂಸ್ಕೃತಿ ಎಂದರು.