Advertisement

ಸಿಎಂ ಸಿದ್ದರಾಮಯ್ಯ ಭೇಟಿಗೂ ಸಂಚಾರ ದಟ್ಟಣೆ ಬಿಸಿ ?

02:27 PM Dec 17, 2017 | Team Udayavani |

ಪುತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 7ರಂದು ಪುತ್ತೂರಿಗೆ ಭೇಟಿ ನೀಡುವುದು ಖಚಿತವಾಗಿದೆ. ಆದರೆ ಈ ಸಂದರ್ಭ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವುದೇ ತ್ರಾಸದಾಯಕ ಸಂಗತಿಯಾಗಿದೆ. ಜನಸಂಖ್ಯೆ ಆಧರಿಸಿ ವ್ಯವಸ್ಥೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಸಿದ್ದರಾಮಯ್ಯ ಭೇಟಿ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು.

Advertisement

ಸಹಾಯಕ ಆಯುಕ್ತ ರಘುನಂದನ ಮೂರ್ತಿ ಮಾತನಾಡಿ, ಮುಖ್ಯಮಂತ್ರಿ ಜತೆಗೆ ಸುಮಾರು 50 ವಾಹನಗಳು ಬರುತ್ತವೆ. ಇದರಲ್ಲಿ 10-15 ವಾಹನಗಳು ವೇದಿಕೆ ಬಳಿಗೆ ಬರಲು ಅವಕಾಶ ಕಲ್ಪಿಸಬೇಕು. ವಾಹಿನಿಗಳು ಪುತ್ತೂರು ಕಾರ್ಯಕ್ರಮವನ್ನು ನೇರ ಸಂಪರ್ಕ ಮಾಡಲಿವೆ. ಈ ಹಿನ್ನೆಲೆಯಲ್ಲಿ ಟಿವಿ ವಾಹನಗಳು ಬರಲಿವೆ. ಮೈದಾನದಲ್ಲಿ ವಾಹನ ಪಾರ್ಕಿಂಗ್‌ ಹಾಗೂ ವೇದಿಕೆಗೆ ಸ್ಥಳ ನೀಡಬೇಕಿದೆ ಎಂದರು.

ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ಮಾತನಾಡಿ, ಪುತ್ತೂರಿನಲ್ಲಿ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆ. ಒಂದು ವೇಳೆ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡುವುದಾದರೆ, ಮೈದಾನವನ್ನು ಎರಡು ಭಾಗವಾಗಿ ಮಾಡಿ, ವೇದಿಕೆಗೆ, ಪಾರ್ಕಿಂಗ್‌ ಗೆ ವ್ಯವಸ್ಥೆ ಮಾಡಬೇಕು ಎಂದರು. ಪ್ರತಿಕ್ರಿಯಿಸಿದ ಮಾಮಚ್ಚನ್‌, ಕೊಂಬೆಟ್ಟು ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್ ಇದೆ. ಪಾರ್ಕಿಂಗ್‌ ವ್ಯವಸ್ಥೆ ಮಾಡಿದರೆ, ಟ್ರ್ಯಾಕ್ ಹಾಳಾಗಲಿದೆ. ಆದ್ದರಿಂದ ಪಾರ್ಕಿಂಗ್‌ ವ್ಯವಸ್ಥೆ ಯನ್ನು ಬೇರೆ ಕಡೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.

ಇನ್ನೂ ಖಚಿತ ತೀರ್ಮಾನವಾಗಿಲ್ಲ
ಚರ್ಚೆಗೆ ತೆರೆ ಎಳೆದ ಶಾಸಕಿ ಶಕುಂತಳಾ ಶೆಟ್ಟಿ, ಕಾರ್ಯಕ್ರಮಕ್ಕೆ ಎಷ್ಟು ಕಾರ್ಯಕರ್ತರು, ಜನರು ಬರುತ್ತಾರೆ ಎಂದು ಸಭೆ ನಡೆಸಿ ತಿಳಿದುಕೊಳ್ಳಲಾಗುವುದು. ಬಳಿಕ ಸಭೆ ನಡೆಸಿ ಈ ಬಗ್ಗೆ ತೀರ್ಮಾನಿಸುವ. ಕೊಂಬೆಟ್ಟು ತಾಲೂಕು ಕ್ರೀಡಾಂಗಣ ಅಥವಾ ಕಿಲ್ಲೆ ಮೈದಾನದಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ. ಈ ಬಗ್ಗೆ ಇನ್ನೂ ಖಚಿತ ತೀರ್ಮಾನ ಕೈಗೊಂಡಿಲ್ಲ. ಪಾರ್ಕಿಂಗ್‌ ವ್ಯವಸ್ಥೆ ಪರಿಶೀಲಿಸಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಯ ಬದಲಾಗಬಹುದು
ಜನವರಿ 7ಕ್ಕೆ ಸಿಎಂ ಬರುವುದು ನಿಗದಿಯಾಗಿದೆ. ಆದರೆ ಎಷ್ಟು ಹೊತ್ತಿಗೆ ಬರುತ್ತಾರೆ ಎನ್ನುವುದು ತಿಳಿದಿಲ್ಲ. ಈಗ ನೀಡಿರುವ ಸಮಯದಲ್ಲಿ ಮಧ್ಯಾಹ್ನ 1 ಗಂಟೆಗೆ ಪುತ್ತೂರಿನಲ್ಲಿ ಕಾರ್ಯಕ್ರಮ. ಇದು ಸ್ವಲ್ಪ ಬದಲಾಗುವ ಸಾಧ್ಯತೆ ಇದೆ. ಬೆಳ್ತಂಗಡಿಗೆ ಹೋಗಿ ಬಳಿಕ ಪುತ್ತೂರಿಗೆ ಬರಲಿದ್ದಾರೆ. ಸಂಜೆ 4.30ಕ್ಕೆ ಮೂಡುಬಿದರೆಯಲ್ಲಿ ಕಾರ್ಯಕ್ರಮ. ಈ ಸಮಯ ಬದಲಾಗಿ, ಪುತ್ತೂರಿಗೆ ಮೊದಲು ಬರುವ ಸಾಧ್ಯತೆಯೂ ಇದೆ. ಉಡುಪಿಯಲ್ಲಿ ರಾತ್ರಿ ತಂಗಲಿದ್ದಾರೆ ಎಂದು ಶಾಸಕಿ ವಿವರ ನೀಡಿದರು.

Advertisement

224 ಕ್ಷೇತ್ರಕ್ಕೂ ಭೇಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ 224 ಕ್ಷೇತ್ರಕ್ಕೂ ಭೇಟಿ ನೀಡಲಿದ್ದಾರೆ. ನಮ್ಮ ಕ್ಷೇತ್ರ, ಅವರ ಕ್ಷೇತ್ರ ಎಂಬುದನ್ನು ನೋಡುವುದಿಲ್ಲ. ಪ್ರತಿ ಕ್ಷೇತ್ರದ ಶಿಲಾನ್ಯಾಸ, ಉದ್ಘಾಟನೆ ಕಾರ್ಯಕ್ರಮವನ್ನು ಇದೇ ದಿನ ನಡೆಸಿಕೊಡಲಿದ್ದಾರೆ ಎಂದು ಶಾಸಕಿ ತಿಳಿಸಿದರು.

ಅಂಬೇಡ್ಕರ್‌ ಭವನ
ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ತತ್‌ ಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಗೆ ಶಾಸಕಿ ಸೂಚನೆ ನೀಡಿದರು. ಅಲ್ಲದೇ, ಸಿಎಂ ಕಾರ್ಯಕ್ರಮದ ವೇದಿಕೆಯಲ್ಲಿ ನೂಕುನುಗ್ಗಲು ಆಗದಂತೆ ಕ್ರಮ ಕೈಗೊಳ್ಳಲು ತಿಳಿಸಿದರು. ತಹಶೀಲ್ದಾರ್‌ ಅನಂತಶಂಕರ, ತಾ.ಪಂ. ಗ್ರಾಮೀಣ ಅಭಿವೃದ್ಧಿ ವಿಭಾಗದ ನವೀನ್‌ ಭಂಡಾರಿ ಉಪಸ್ಥಿತರಿದ್ದರು.

ಪ್ರಗತಿ ವಿವರ
ಸಹಾಯಕ ಆಯುಕ್ತ ರಘುನಂದನ ಮೂರ್ತಿ ಮಾತನಾಡಿ, ಎಲ್ಲ ಇಲಾಖೆಗಳು ಪಾಲ್ಗೊಳ್ಳಬೇಕು. ಕೆಲಸಗಳನ್ನು ಹಂಚಿಕೊಂಡು, ಕಾರ್ಯಕ್ರಮ ಯಶಸ್ಸು ಮಾಡಬೇಕು. ತಾಲೂಕಿನ 44 ಇಲಾಖೆಗಳ 2013ರಿಂದ ಇಲ್ಲಿವರೆಗಿನ ಪ್ರಗತಿ ವಿವರ ನೀಡಬೇಕು. ಆಯಾ ಇಲಾಖೆಯ ಚೆಕ್‌ ವಿತರಣೆ, 94ಸಿ, 94ಸಿಸಿ ಹಕ್ಕುಪತ್ರ ವಿತರಣೆ, ಗಂಗಾ ಕಲ್ಯಾಣ ಯೋಜನೆ, ಶಿಲಾನ್ಯಾಸ ಕಾರ್ಯಕ್ರಮಗಳ ವಿವರವನ್ನು ಸೋಮವಾರದೊಳಗೆ ನೀಡಬೇಕು. ಇದನ್ನು ತಕ್ಷಣ ಅಂತಿಮ ಮಾಡಿ, ಸಾಂಕೇತಿಕವಾಗಿ ಇಬ್ಬರಿಗೆ ವೇದಿಕೆಯಲ್ಲಿ ಮುಖ್ಯಮಂತ್ರಿ ಕೈಯಿಂದ ವಿತರಣೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next