ಬೆಂಗಳೂರು: ಡ್ರೋನ್ ಸರ್ವೇ ಮತ್ತು ಎಐ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಳ್ಳುವ ಮೂಲಕ ಕ್ರಷರ್‌ಗಳಲ್ಲಿ ರಾಜಸ್ವ ಸಂಗ್ರಹ ಸೋರಿಕೆ ತಡೆಗಟ್ಟುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿರುವ ಅವರು, ತಂತ್ರಜ್ಞಾನ ಆಧರಿತ ಗಣಿಗಾರಿಕೆ ವ್ಯವಸ್ಥೆ ಜಾರಿಗೆ ತನ್ನಿ. ವಿದೇಶಗಳಲ್ಲಿ ಗಣಿ ಸರ್ವೇಕ್ಷಣೆಗೆ ಡ್ರೋನ್ ಹಾಗೂ ಎಐ (ಕೃತಕ ಬುದ್ಧಿಮತ್ತೆ) ಬಳಕೆಯಾಗುತ್ತಿದೆ. ನಮ್ಮಲ್ಲೂ ಬಳಕೆ ಮಾಡಿ ಎಂದು ಹೇಳಿದರು.
ಹರಾಜಿಗೆ ಲಭ್ಯವಿರುವ ಗಣಿಗಳ ಹರಾಜು ಪ್ರಕ್ರಿಯೆಯನ್ನು ಕೂಡಲೇ ಕೈಗೆತ್ತಿಕೊಳ್ಳಿ. ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ, ರಾಜಸ್ವ ಸಂಗ್ರಹ ಚುರುಕುಗೊಳಿಸಿ. ಉಪ ಖನಿಜ ರಾಜಸ್ವ ಸಂಗ್ರಹ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವಂತೆಯೂ ಸೂಚಿಸಿದರು.
ಕಂದಾಯ ಇಲಾಖೆ ಲ್ಯಾಂಡ್ ಬ್ಯಾಂಕ್ ಸೃಜಿಸಿದಲ್ಲಿ, ಅರಣ್ಯ ಪರಿಹಾರ ಭೂಮಿ ನೀಡಲು ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಮಾನದಂಡವಾಗಿ ನಾನು ಪರಿಗಣಿಸುತ್ತೇನೆ. ಬೇರೆ ಯಾವ ಪ್ರಭಾವಕ್ಕೂ ನಾನು ಮಣೆ ಹಾಕಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಮೇಲ್ಮನವಿ ಪ್ರಕರಣಗಳನ್ನು 3 ತಿಂಗಳೊಳಗೆ ವಿಲೇವಾರಿ ಮಾಡಬೇಕು. ವಿಳಂಬ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಐಜಿಎಸ್‌ಟಿ ನಕಾರಾತ್ಮಕ ಸೆಟಲ್ ಮೆಂಟ್ ಆಗುವ ಕಡೆ ಇತರ ಸರಕುಗಳ ಮೇಲಿನ ತೆರಿಗೆ ಸಂಗ್ರಹವನ್ನು ಚುರುಕಗೊಳಿಸಬೇಕು. ಕೆಲಸ ಮರು ಹಂಚಿಕೆ 2017 ಕ್ಕೂ ಹಿಂದಿನ ಪ್ರಕರಣಗಳ ತೀರ್ಮಾನವಾಗಿರುವುದರಿಂದ ಬೆಂಗಳೂರಿನಲ್ಲಿ ಹೆಚ್ಚು ಮೇಲ್ಮನವಿಗಳು ದಾಖಲಾಗುತ್ತಿದು, ಇವುಗಳ ವಿಲೇವಾರಿಗಾಗಿ ಹೆಚ್ಚುವರಿ ಜಂಟಿ ಆಯುಕ್ತರ ಹುದ್ದೆ ಮಂಜೂರಾಗಿದೆ. ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದರು.
ಅಂದಾಜು, ಜಾರಿ, ಮೇಲ್ಮನವಿ ಸಮನ್ವಯ ಸಭೆ ತಿಂಗಳಿಗೆ 2 ಬಾರಿ ಕಡ್ಡಾಯವಾಗಿ ನಡೆಸಬೇಕು. ಕಾರ್ಯಯೋಜನೆ ಸಿದ್ಧಪಡಿಸಬೇಕು. ಮೇಲ್ಮನವಿಗಳನ್ನು ಸಕಾಲದಲ್ಲಿ ಇತ್ಯರ್ಥ ಮಾಡಬೇಕು. ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಆ ವೇಳೆಗೆ ಗುರಿ ತಲುಪಿರಬೇಕು ಎಂದು ಸೂಚನೆ ನೀಡಿದರು.