ಮೈಸೂರು: ವರುಣಾ ಕ್ಷೇತ್ರದ ಮಾದರಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರವನ್ನೂ ಅಭಿವೃದ್ಧಿ ಪಡಿಸಲು ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಕೆಂದು ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಗೆಜ್ಜಗಳ್ಳಿ, ಮಂಡಕಳ್ಳಿ ,ಕೆ.ಎನ್.ಹುಂಡಿ, ಬೀರೇಗೌಡನ ಹುಂಡಿ, ಕಡಕೊಳ, ಕರಡಿಮರಯ್ಯನ ಹುಂಡಿ, ದಡದಹಳ್ಳಿ ಗ್ರಾಮಗಳಲ್ಲಿ ಸುಮಾರು 5 ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ, ರಸ್ತೆ ಡಾಂಬರಿಕರಣ, ವಿವಿಧ ಕೋಮಿನ ಸಮುದಾಯ ಭವನಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ಷೇತ್ರದ ಶಾಸಕರ ನಿರ್ಲಕ್ಷ್ಯದಿಂದ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು ಇದನ್ನು ಮನಗಂಡ ಮುಖ್ಯಮಂತ್ರಿಗಳು ಸುಮಾರು 400 ಕೋಟಿ ರೂ.ಗಳನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ್ದಾರೆ.
1983ರಿಂದಲೂ ಸಿದ್ದರಾಮಯ್ಯ ಅವರಿಗೆ ಆಶೀರ್ವಾದ ಮಾಡಿದ್ದೀರಿ, ಈ ಚುನಾವಣೆ ಮುಖ್ಯಮಂತ್ರಿಗಳಿಗೆ ಕೊನೆಯ ಚುನಾವಣೆಯಾಗಿದೆ. ನಿಮ್ಮೆಲ್ಲರ ಋಣ ತೀರಿಸಲು ಮತ್ತೂಮ್ಮೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮತ್ತೂಮ್ಮೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಜಮೀನು ಕಳೆದುಕೊಂಡ ಕುಟುಂಬದ ಸದಸ್ಯರುಗಳಿಗೆ ಕಾರ್ಖಾನೆಯ ಮಾಲೀಕರು ಕೆಲಸ ಕೊಡಲೇಬೇಕು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಿಮ್ಮ ಮಕ್ಕಳಿಗೆ ಕೆಲಸಕೊಡಿಸಲು ಪ್ರಯತ್ನಿಸುವೆ. ಇದೇ 23 ಮತ್ತು 24ರಂದು ನಡೆಯುವ ಉದ್ಯೋಗ ಮೇಳಕ್ಕೆ ಎಲ್ಲರೂ ಬನ್ನಿರಿ, ನಿಮ್ಮ ಗ್ರಾಮಕ್ಕೆ ಆಗಬೇಕಾದ ಕೆಲಸಗಳನ್ನು ಪಟ್ಟಿಮಾಡಿಕೊಡಿ, ಮಾಡಿಸಿಕೊಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ. ತಾ.ಪಂ. ಸದಸ್ಯರಾದ ಶ್ರೀಕಂಠತೊಂಡೇಗೌಡ. ಸಿ.ಎಂ. ಸಿದ್ದರಾಮೇಗೌಡ. ಸುರೇಶ್, ನಂದಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಜು ಹಾಜರಿದ್ದರು.