ಬೆಂಗಳೂರು: ರೈತರ ಸಾಲ ಮನ್ನಾ ಬಗ್ಗೆ ಹಗುರವಾಗಿ ಮಾತನಾಡಿರುವ ಕೇಂದ್ರ ಸಚಿವರಾದ ವೆಂಕಯ್ಯನಾಯ್ಡು ಹಾಗೂ ಅರುಣ್ ಜೇಟ್ಲಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ವಾಗ್ಧಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರದ ಮಂತ್ರಿಗಳು ಅತ್ಯಂತ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಅರುಣ್ ಜೇಟ್ಲಿ ಹೇಳಿದರೆ, ರೈತರ ಸಾಲ ಮನ್ನಾ ಮಾಡುವುದು ರಾಜ್ಯ ಸರ್ಕಾರಗಳಿಗೆ ಒಂದು ಫ್ಯಾಷನ್ ಆಗಿದೆ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ. ಇದರಿಂದ ರೈತರ ಬಗೆಗಿನ ಬಿಜೆಪಿ ಕಾಳಜಿ ಎಂತಹದ್ದೆಂದು ಗೊತ್ತಾಗುತ್ತದೆ ಎಂದರು.
ಸಹಕಾರಿ ಬ್ಯಾಂಕುಗಳ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಬಗ್ಗೆ ಕೇಂದ್ರ ಮೇಲೆ ಒತ್ತಡ ತರುತ್ತೇವೆ ಎಂದು ಹೇಳಿದ್ದ ಬಿಜೆಪಿಯವರು ಸಂಪೂರ್ಣ ಸಾಲ ರಾಜ್ಯ ಸರ್ಕಾರವೇ ಮನ್ನಾ ಮಾಡಲಿ ಎಂದು ಇಂದು ಹೇಳುತ್ತಿದೆ. ಎಲ್ಲ ಸಾಲ ರಾಜ್ಯ ಸರ್ಕಾರವೇ ಮನ್ನಾ ಮಾಡಿದರೆ ಬಿಜೆಪಿಯವರಿಗೇನು ಕೆಲಸ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೇ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ರೈತರ ಸಾಲ ಮನ್ನಾ ಮಾಡುವುದು ಫ್ಯಾಷನ್ ಎಂದು ಹೇಳುವ ಮೂಲಕ ವೆಂಕಯ್ಯನಾಯ್ಡು ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ರೈತರ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡುವುದು ಜವಾಬ್ದಾರಿ ಸ್ಥಾನದಲ್ಲಿರುವ ಕೇಂದ್ರ ಸಚಿವರಿಗೆ ಶೋಭೆ ತರುವುದಿಲ್ಲ. ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಿದರೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ತರಲಾಗುವುದು ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಈಗ ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಆದರೆ, ಬಿಜೆಪಿಯವರು ತಾವು ಆಡಿದ ಮಾತು ಮರೆತು, ರಾಜ್ಯ ಸರ್ಕಾರವೇ ಸಂಪೂರ್ಣ ಸಾಲ ಮನ್ನಾ ಮಾಡಲಿ ಎಂದು ಹೇಳುತ್ತಿದ್ದಾರೆ. ಇದು ಬಿಜೆಪಿಯ ದ್ವಂದ್ವ ನಿಲುವು ತೋರಿಸುತ್ತದೆ ಎಂದರು.