ಕೊಪ್ಪಳ: ಸಿಎಂ ಸಿದ್ದರಾಮಯ್ಯ ಕೊಪ್ಪಳ ತಾಲೂಕಿನ ಬಸಾಪುರ ಹೆಲಿಪ್ಯಾಡ್‌ನಲ್ಲಿ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಕೆ.ಎನ್.ರಾಜಣ್ಣ ಜತೆ ಅರ್ಧ ಗಂಟೆಗಳ ಕಾಲ ಪ್ರತ್ಯೇಕ ಕೊಠಡಿಯಲ್ಲಿ ರಹಸ್ಯ ಸಭೆ ನಡೆಸಿದ್ದು ಕುತೂಹಲ ಮೂಡಿಸಿದೆ.
ವಿಜಯಪುರ ಜಿಲ್ಲೆಯಲ್ಲಿ ನಡೆದ ಸಹಕಾರ ಸಪ್ತಾಹ ಸಮಾರಂಭ ಮುಗಿಸಿ ನೇರ ಹೆಲಿಕಾಪ್ಟರ್ ಮೂಲಕ ಬಸಾಪುರ ವಿಮಾನ ನಿಲ್ದಾಣಕ್ಕೆ ಸಂಜೆ ಬಂದಿಳಿಸಿದ ಸಿಎಂ ಸಿದ್ದರಾಮಯ್ಯ, ವಿಮಾನ ನಿಲ್ದಾಣದಲ್ಲಿ ಕೊಠಡಿಯಲ್ಲಿ ಸಚಿವರ ಜತೆ ಮಾತುಕತೆ ನಡೆಸಿದರು.
ಕೊಠಡಿಯೊಳಗೆ ಇಬ್ಬರು ಸಚಿವರು ಹೊರತುಪಡಿಸಿ ಎಲ್ಲರನ್ನೂ ಹೊರಗೆ ಕಳುಹಿಸಲಾಗಿತ್ತು. ಯಾವುದೇ ಅಧಿ ಕಾರಿಗಳು, ಸ್ಥಳೀಯ ನಾಯಕರಿಗೂ ಕೊಠಡಿಯೊಳಗೆ ಪ್ರವೇಶವಿರಲಿಲ್ಲ. ರಾಜಕೀಯ ವಿದ್ಯಮಾನಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಸಚಿವರೊಂದಿಗೆ ರಹಸ್ಯ ಸಭೆ ನಡೆಸಿ ಹೊರ ಬಂದ ಸಿಎಂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೆ ಪ್ರಯಾಣ ಬೆಳೆಸಿದರು. ಈ ಕುರಿತು ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿ, ವಿಮಾನದಲ್ಲಿ ತೆರಳಲು ಸಮಯವಿದ್ದ ಕಾರಣ ವಿವಿಧ ವಿಷಯ ಚರ್ಚೆ ಮಾಡುತ್ತಾ ಕುಳಿತಿದ್ದೇವು. ಇದರಲ್ಲಿ ಹೊಸತೇನೂ ಇಲ್ಲ. ನಮಗೆ ಹೈಕಮಾಂಡ್‌ನಿಂದ ಯಾವುದೇ ಕರೆ ಬಂದಿಲ್ಲ. ನಿಮಗೆ ಇಂಥ ವಿಷಯ ಯಾರು ತಿಳಿಸಿದರೋ ನನಗೆ ಗೊತ್ತಿಲ್ಲ ಎಂದರು.