Advertisement

‘Anna Bhagya’ ಯೋಜನೆ ವಿಫಲಗೊಳಿಸಲು ಕೇಂದ್ರ ಸರ್ಕಾರ ಷಡ್ಯಂತ್ರ: ಸಿದ್ದರಾಮಯ್ಯ

09:10 PM Jun 14, 2023 | Team Udayavani |

ಬೆಂಗಳೂರು: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ‘ಅನ್ನ ಭಾಗ್ಯ’ ಜಾರಿಗೆ ಬೇಕಾದಷ್ಟು ಅಕ್ಕಿಯನ್ನು ರಾಜ್ಯಕ್ಕೆ ಸಿಗದಂತೆ ಮಾಡುವ ಮೂಲಕ ಕಾಂಗ್ರೆಸ್ ಆಡಳಿತದ ಬಡವರಿಗೆ ಹೆಚ್ಚುವರಿ ಅಕ್ಕಿ ನೀಡುವ ಚುನಾವಣ ಭರವಸೆಯನ್ನು “ವಿಫಲಗೊಳಿಸಲು” ಸಂಚು ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಬಡವರಿಗೆ ಅನುಕೂಲವಾಗುವ ಯೋಜನೆ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಭಯದಿಂದ ಕರ್ನಾಟಕ ಸರ್ಕಾರಕ್ಕೆ ಅಕ್ಕಿ ನೀಡದಿರಲು ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರವು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

”ನಮ್ಮ ಸರ್ಕಾರವು ಇತರ ಮೂಲಗಳಿಂದ ಅಕ್ಕಿಯನ್ನು ಪಡೆಯಲು ಮತ್ತು ಉತ್ಪಾದಿಸುವ ರಾಜ್ಯಗಳಿಂದ ಪಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಭರವಸೆ ನೀಡಿದಂತೆ ಅಗತ್ಯವಿರುವವರಿಗೆ ಸಮಯಕ್ಕೆ ಸರಬರಾಜು ಮಾಡುವ ಗುರಿಯನ್ನು ಹೊಂದಿದೆ. ಈಗಲೂ ನಾವು ಅಕ್ಕಿ ನೀಡಲು ನಮ್ಮ ಮಟ್ಟದ ಪ್ರಯತ್ನ ಮಾಡುತ್ತೇವೆ.ವಿಳಂಬವಾದರೆ, ಅದಕ್ಕೆ ಭಾರತ ಸರ್ಕಾರವೇ ಹೊಣೆ” ಎಂದು ಹೇಳಿದರು.

”ನಮಗೆ ಅಕ್ಕಿ ನೀಡಲು ಒಪ್ಪಿದ ನಂತರ ಕೇಂದ್ರವು ರಾಜಕೀಯ ನಿರ್ಧಾರ ತೆಗೆದುಕೊಂಡಿದೆ. ಅವರ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಅಕ್ಕಿ ನೀಡಲು ಒಪ್ಪಿಕೊಂಡಿರುವ ಆಧಾರದ ಮೇಲೆ, ನಾವು ಜುಲೈ 1 ರಿಂದ ಬಡವರಿಗೆ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದೇವೆ. ಕರ್ನಾಟಕದಲ್ಲಿ ನಮಗೆ ಅಷ್ಟು ಅಕ್ಕಿ ಸಿಗುವುದಿಲ್ಲ. ಕೇಂದ್ರದ ಸೂಚನೆ ಮೇರೆಗೆ ಅವರು ಈಗ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ”ಎಂದು ಸಿಎಂ ಹೇಳಿದರು.

”ಬಡವರಿಗೆ ಇನ್ನೂ 5 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆಯನ್ನು ಕೇಂದ್ರವು ಹಾಳುಮಾಡಲು ಪ್ರಯತ್ನಿಸುತ್ತಿದೆ. ಈ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡಲು ಯತ್ನಿಸುತ್ತಿದೆ. ಎಫ್‌ಸಿಐ ಅಧಿಕಾರಿಗಳು ತಮ್ಮ ಬಳಿ ಏಳು ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ ಎಂದು ಹೇಳಿದ್ದರು, ಆದರೂ ಅವರು ಹಿಂದೆ ಸರಿದಿದ್ದಾರೆ, ಇದರ ಹಿಂದಿನ ಉದ್ದೇಶವೇನು. ಇದು ಕಾರ್ಯಕ್ರಮವನ್ನು ಹಾಳುಮಾಡುವುದು. ಬಿಜೆಪಿ ಬಡವರ ವಿರೋಧಿಯಾಗಿದೆ” ಎಂದು ಕಿಡಿ ಕಾರಿದರು.

Advertisement

”ಅಕ್ಕಿಯನ್ನು ಉಚಿತವಾಗಿ ಕೇಳಲಿಲ್ಲ, ಹಣ ಕೊಟ್ಟು ಖರೀದಿಸಬೇಕಿತ್ತು.ಅವರು ಖಾಸಗಿ ಕಂಪನಿಗಳಿಗೆ ಸರಬರಾಜು ಮಾಡಲು ಸಿದ್ಧರಿದ್ದಾರೆ, ಆದರೆ ರಾಜ್ಯ ಸರ್ಕಾರಕ್ಕೆ ಅಲ್ಲ,ಕೇಂದ್ರವು ಅಕ್ಕಿ ನೀಡುವುದಾಗಿ ಭರವಸೆ ನೀಡಿದ ನಂತರ ಎಫ್‌ಸಿಐ ಹಿಂದೆ ಸರಿಯುವ ಮೂಲಕ ನಮ್ಮನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ಅವರ ಭರವಸೆ ಮೇರೆಗೆ ಜುಲೈ 1ರಿಂದ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದೆವು. ಕರ್ನಾಟಕವು ಅಕ್ಕಿ ಉತ್ಪಾದಿಸುವ ರಾಜ್ಯಗಳನ್ನು ಸಂಪರ್ಕಿಸುಸುವುದರ ಜತೆಗೆ, ಜನರಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟದ (NCCF) ದಿಂದ ಅಕ್ಕಿ ಪಡೆಯಲು ಪ್ರಯತ್ನಿಸುತ್ತದೆ”ಎಂದು ಹೇಳಿದರು.

ಇಲ್ಲಿಯವರೆಗೆ ಏನಾಗಿದೆ ಎಂಬುದರ ವಿವರಗಳನ್ನು ಹಂಚಿಕೊಂಡ ಸಿದ್ದರಾಮಯ್ಯ, ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡಲು ನಮಗೆ ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ. ಕ್ಯಾಬಿನೆಟ್ ನಿರ್ಧಾರದ ನಂತರ, ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಎಫ್‌ಸಿಐ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಮತ್ತು ಅವರು ತಮ್ಮ ಬಳಿ ಸ್ಟಾಕ್ ಇರುವುದರಿಂದ ಸರಬರಾಜು ಮಾಡುವುದಾಗಿ ಹೇಳಿದರು.

ಇದು ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿರುವುದರಿಂದ ತಾವು ಮತ್ತು ಸಚಿವ ಕೆ.ಎಚ್.ಮುನಿಯಪ್ಪ ಅವರು ಎಫ್‌ಸಿಐನ ಉಪ ಪ್ರಧಾನ ವ್ಯವಸ್ಥಾಪಕರೊಂದಿಗೆ ಖುದ್ದು ಮಾತನಾಡಿದ್ದೇವೆ ಎಂದು ತಿಳಿಸಿದರು. ಪ್ರತಿ ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕೆಜಿಗೆ 34 ರೂ. ಜೊತೆಗೆ 2.60 ರೂ. ಸಾಗಾಣಿಕೆ ಶುಲ್ಕ – ಒಟ್ಟು ರೂ. 36.60 ದರದಲ್ಲಿ ನೀಡಲು ಅಧಿಕಾರಿ ಒಪ್ಪಿಕೊಂಡಿದ್ದರು. ಇದರಿಂದ ರಾಜ್ಯ ಸರಕಾರಕ್ಕೆ ತಿಂಗಳಿಗೆ 840 ಕೋಟಿ ರೂ. ಮತ್ತು ವಾರ್ಷಿಕ 10,092 ಕೋಟಿ ರೂ. ವ್ಯಯವಾಗುತ್ತದೆ ಎಂದರು.

ಅಗತ್ಯ ಪ್ರಮಾಣದ ಅಕ್ಕಿ ನೀಡಲು ಒಪ್ಪಿಕೊಂಡ ನಂತರ, ಜೂನ್ 9 ರಂದು ರಾಜ್ಯ ಸರ್ಕಾರದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಎಫ್‌ಸಿಐ ಜೂನ್ 12 ರಂದು ಎರಡು ಪತ್ರಗಳನ್ನು ಕಳುಹಿಸಿದೆ ಎಂದು ತಿಳಿಸಿದ ಸಿದ್ದರಾಮಯ್ಯ ಅವರು ಪತ್ರದಲ್ಲಿ 2,08,425.750 ಮೆಟ್ರಿಕ್ ಟನ್ ನೀಡಲು ಒಪ್ಪಿದ್ದಾರೆ ಎಂದು ಹೇಳಿದರು. ಜುಲೈ ತಿಂಗಳ ಅಕ್ಕಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ (ದೇಶೀಯ) ಇ-ಹರಾಜು ಇಲ್ಲದೆ ಕೆಜಿಗೆ 34 ರೂ. ಇನ್ನೊಂದು ಪತ್ರದಲ್ಲಿ ಅವರು ಇನ್ನೂ 13,819.485 ಮೆಟ್ರಿಕ್ ಟನ್‌ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವಿವರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next