Advertisement

CM ಸಿದ್ದರಾಮಯ್ಯ ಬದಲಾವಣೆ ಸದ್ದಿಗೆ ಪ್ರತಿರೋಧದ ದನಿ

11:44 PM Jun 28, 2024 | Team Udayavani |

ಬೆಂಗಳೂರು/ಹುಬ್ಬಳ್ಳಿ: ಸಮುದಾಯವಾರು ಡಿಸಿಎಂ ಹುದ್ದೆ ಬೇಡಿಕೆ ತೀವ್ರ ಗೊಳ್ಳುತ್ತಿರುವ ನಡುವೆಯೇ ಮುಖ್ಯಮಂತ್ರಿ ಬದಲಾವಣೆ ಸದ್ದು ಸಹ ದೊಡ್ಡ ಮಟ್ಟದಲ್ಲೇ ಕೇಳಿಬರುತ್ತಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಸಿಎಂ ಮಾಡಬೇಕು ಎಂದು ಒಕ್ಕಲಿಗ ಸಮುದಾಯದ ಸ್ವಾಮೀಜಿ ಹೇಳಿಕೆ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Advertisement

ಸ್ವಾಮೀಜಿಗಳ ಹೇಳಿಕೆ ವಿರುದ್ಧ ಪ್ರತಿರೋಧದ ದನಿ ಹೊರಡಿಸಿರುವ ಸಚಿವರು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ.

ಬಹುಮುಖ್ಯವಾಗಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ಬೈರತಿ ಸುರೇಶ್‌, ಎನ್‌. ಚಲುವರಾಯಸ್ವಾಮಿ, ಕೆ.ಎನ್‌. ರಾಜಣ್ಣ, ಲಕ್ಷ್ಮೀ ಹೆಬ್ಬಾಳ್ಕರ್‌, ಕೆ. ವೆಂಕಟೇಶ್‌, ದಿನೇಶ್‌ ಗುಂಡೂರಾವ್‌ ಇನ್ನಿತರರು ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಬೀಸಿದ್ದಾರೆ. ಇಡೀ ಬೆಳವಣಿಗೆ ಬಗ್ಗೆ ದಿಲ್ಲಿಯಲ್ಲಿ ಗರಂ ಆಗಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಸ್ವಾಮೀಜಿಗಳಿಗೂ ರಾಜಕಾರಣಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಸಿಎಂ ಬದಲಾವಣೆ ಚರ್ಚೆ ವ್ಯಾಪಕಗೊಳ್ಳುತ್ತಿದ್ದಂತೆ, ವಿಪಕ್ಷ ನಾಯಕ ಆರ್‌. ಅಶೋಕ್‌, ಸಿಎಂ ಹುದ್ದೆಗೆ ಪೈಪೋಟಿ ನೀಡುತ್ತಿರುವ ಡಿಕೆಶಿ ಬಲ ಕುಗ್ಗಿಸಲು ಸುರೇಶ್‌ ಅವರನ್ನು ಸೋಲಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ ಕೂಡ ಹೆಚ್ಚುವರಿ ಡಿಸಿಎಂ ಬೇಡಿಕೆ ಸೃಷ್ಟಿಸಿದ್ದ ಸಿದ್ದರಾಮಯ್ಯ ಬುಡಕ್ಕೆ ಈಗ ಸಮಸ್ಯೆ ಬಂದಿದೆ ಎಂದು ಲೇವಡಿ ಮಾಡಿದ್ದಾರೆ.

ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಕಾಂಗ್ರೆಸ್‌ ಪಕ್ಷದ 2 ಕಣ್ಣು
ಬೆಳಗಾವಿ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಇಬ್ಬರೂ ಕಾಂಗ್ರೆಸ್‌ ಪಕ್ಷದ ಎರಡು ಕಣ್ಣುಗಳಿದ್ದಂತೆ. ಯಾರನ್ನು ಉಪಮುಖ್ಯಮಂತ್ರಿ ಮಾಡಬೇಕು ಎನ್ನುವುದನ್ನು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾ ಳ್ಕರ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ 136 ಜನ ಶಾಸಕರಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ಒಳ್ಳೆಯ ಮುಖ್ಯಮಂತ್ರಿಯನ್ನು ನೇಮಕ ಮಾಡಿದ್ದಾರೆ. ನಮ್ಮಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಮಹಿಳಾ ಕೋಟಾದಲ್ಲಿ ನಾನು ಆಸೆ ಪಟ್ಟರೆ ಡಿಸಿಎಂ ಮಾಡಿ ಬಿಡುತ್ತಾರೆಯೇ? ನನಗೆ ಏನೇ ಸ್ಥಾನಮಾನ ಕೊಡುವುದಿದ್ದರೂ ಅದು ಹೈಕಮಾಂಡ್‌ ತೀರ್ಮಾನ ಎಂದರು.

ಸಿಎಂ ಏಕೆ ಬದಲಿಸಬೇಕು?
ವಿಜಯಪುರ: ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಈ ಬಗ್ಗೆ ಯಾವ ಚರ್ಚೆನೂ ಇಲ್ಲ. ಸಿಎಂ ಬದಲಾವಣೆ ವಿಚಾರ ಈಗ ಅಪ್ರಸ್ತುತ. ಅಷ್ಟಕ್ಕೂ ಸಿಎಂ ಬದಲಾವಣೆ ಏಕೆ ಮಾಡಬೇಕು. ಸಿದ್ದರಾಮಯ್ಯ ಅವರೇನು ಜನಪ್ರಿಯ ನಾಯಕರಲ್ಲವಾ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಮಾತನಾಡಿ, ಒಕ್ಕಲಿಗ ಸ್ವಾಮೀಜಿ ಮಾತನಾಡಿದ್ದು ಅವರ ವೈಯಕ್ತಿಕ ಅಭಿಪ್ರಾಯ. ಬೇರೆಯವರು ಮಾತನಾಡಿದ್ದರೆ ಅದರ ಬಗ್ಗೆ ನಾನು ಏನೂ ಹೇಳ್ಳೋಕಾಗುವುದಿಲ್ಲ. ಎರಡೂವರೆ ವರ್ಷಕ್ಕೆ ಸಿಎಂ ಬದಲಾವಣೆ ಒಪ್ಪಂದ ವಿಚಾರ ಯಾರು ಹೇಳಿದ್ದಾರೆ ಗೊತ್ತಿಲ್ಲ. ಸಿದ್ದರಾಮಯ್ಯ ನಮ್ಮ ಸಿಎಂ ಇದ್ದಾರೆ. ಒಳ್ಳೆಯ ಆಡಳಿತಗಾರರಾಗಿದ್ದಾರೆ. ಒಬ್ಬರು ಸಿಎಂ ಇದ್ದಾಗ ಬದಲಾವಣೆ ಬಗ್ಗೆ ಪ್ರಶ್ನೆಯೇ ಇಲ್ಲ ಎಂದರು.

ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಸ್ವಾಮೀಜಿಗಳು ಬದಲಾವಣೆ ಮಾಡ್ತಾರಾ? ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಂದು ರಾಜಕೀಯ ವ್ಯವಸ್ಥೆ ಇದೆ. ಆದರೆ, ಸ್ವಾಮೀಜಿಗಳು ಸಿಎಂ ಮಾಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಮೂವರು ಡಿಸಿಎಂ ಹುದ್ದೆ ಸೃಷ್ಟಿಸುವ ಕುರಿತು ಪಕ್ಷದ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ.
ಆರ್‌.ಬಿ. ತಿಮ್ಮಾಪುರ,
ಅಬಕಾರಿ ಸಚಿವ

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವುದು ತರಕಾರಿ ಮಾರುಕಟ್ಟೆಯಲ್ಲಿ ಅಲ್ಲ. ಇಂಥ ವಿಷಯಗಳನ್ನು ಬಹಿರಂಗವಾಗಿ ಮಾತನಾಡುವವರ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕು. ಸಿಎಂ, ಡಿಸಿಎಂ ಬದಲಾವಣೆ ಮಾಡುವುದರ ಬಗ್ಗೆ ಬಹಿರಂಗವಾಗಿ ಚರ್ಚೆ ಆಗಬಾರದು. ಕೇವಲ ಪ್ರಚಾರಕ್ಕಾಗಿ ಇಂಥ ಹೇಳಿಕೆ ನೀಡುವುದು ಸರಿಯಾದ ಕ್ರಮ ಅಲ್ಲ.
– ಆರ್‌.ವಿ. ದೇಶಪಾಂಡೆ, ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ

ಸ್ವಾಮೀಜಿಗಳಿಗೂ ಮತ್ತು ರಾಜಕೀಯಕ್ಕೂ ಸಂಬಂಧವಿಲ್ಲ. ಒಂದು ಸಮುದಾಯಕ್ಕೆ ಸೇರಿದ ಸ್ವಾಮೀಜಿಗಳು ಈ ರೀತಿಯ ಹೇಳಿಕೆ ನೀಡಬಾರದು. ಅವರು ತಿಳಿವಳಿಕೆ ಇದ್ದುಕೊಂಡು ಮಾತನಾಡಿದ್ದಾರೋ ಇಲ್ಲವೋ ಎಂಬುವುದು ಗೊತ್ತಿಲ್ಲ. ಸ್ವಾಮೀಜಿಗಳು ಏಕೆ ರಾಜಕೀಯ ಮಾತುಗಳನ್ನಾಡಿದರೆ ಎನ್ನುವುದು ಸಹ ಗೊತ್ತಿಲ್ಲ.
– ಕೆ. ವೆಂಕಟೇಶ್‌, ಪಶು ಸಂಗೋಪನೆ, ರೇಷ್ಮೆ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next