Advertisement

ತುಮಕೂರು ಸರ್ಕಾರಿ ಬಸ್ ನಿಲ್ದಾಣಕ್ಕೆ ದೇವರಾಜ ಅರಸು ನಾಮಕರಣ: ಸಿಎಂ ಸಿದ್ದರಾಮಯ್ಯ

09:58 AM Jan 31, 2024 | Team Udayavani |

ತುಮಕೂರು: ನಗರದ  ನೂತನ ಕೆ.ಎಸ್.ಆರ್.ಟಿ.ಸಿಬಸ್ ನಿಲ್ದಾಣಕ್ಕೆ ಮಾಜಿ ಮುಖ್ಯ ಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಮುಖಂಡರಾದ ಡಿ.ದೇವರಾಜ ಅರಸು ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಜಿಲ್ಲಾಪಂಚಾಯತ್, ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಸೋಮವಾರ ತುಮಕೂರು ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು.

ತುಮಕೂರು ನಗರದಲ್ಲಿ ಇಡೀ ಜಿಲ್ಲೆಗೆ ಸರ್ಕಾರದಿಂದ ಕೊಡುವ ಸೌಲಭ್ಯಗಳಡಿ 30 ಸಾವಿರ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಣೆ ಮಾಡಲಾಗಿದೆ. 657 ಕೋಟಿ 27ಲಕ್ಷ. ರೂ‌. ವೆಚ್ಚ ತಗುಲಿದೆ‌. ಜೊತೆಗೆ ನೂತನವಾಗಿ ಬಸ್ ನಿಲ್ದಾಣ ಉದ್ಘಾಟಿಸಲಾಗಿದ್ದು, ಬಸ್ ನಿಲ್ದಾಣಕ್ಕೆ ಡಿ.ದೇವರಾಜ ಅರಸು ಬಸ್ ನಿಲ್ದಾಣ ನಾಮಕರಣ ಮಾಡಲಾಗಿದೆ. ದೇವರಾಜ ಅರಸು ಅವರ ಹೆಸರಲ್ಲಿ ಬಸ್ ನಿಲ್ದಾಣ ಕಾರ್ಯನಿರ್ವಹಿಸಲಿದೆ ಎಂದರು‌.

ಸರ್ಕಾರದಲ್ಲಿ ಹಣ ಇಲ್ಲ. ಸರ್ಕಾರ ದಿವಾಳಿಯಾಗಿದೆ ಎನ್ನುವವರಿಗೆ ಈ ಕಾರ್ಯಕ್ರಮಗಳೇ ಉತ್ತರ. ನಮ್ಮ ಸರ್ಕಾರ ದಿವಾಳಿಯಾಗಿಲ್ಲ. ಗ್ಯಾರಂಟಿ  ಯೋಜನೆ ಜಾರಿ ಮಾಡಲಿಕ್ಕೆ ಸಾಧ್ಯವಿಲ್ಲ. ಜಾರಿಯಾದರೆ ಸರ್ಕಾರ ದಿವಾಳಿಯಾಗಲಿದೆ ಎಂದು ಪ್ರಧಾನಿಯವರೆ ಹೇಳಿದ್ದರು‌‌.  ಆದರೆ ನಾವು ದಿವಾಳಿಯಾಗಿಲ್ಲ.3.80 ಸಾವಿರ ಕೋಟಿ ಬಜೆಟ್ ಮಂಡಿಸಲಾಗುವುದು ಎಂದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುತ್ತೆವೆ. ಜೊತೆಗೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡುತ್ತೇವೆ. ಯಾವುದೆ ಯೋಜನೆ ನಿಂತಿಲ್ಲ ಎಂದರು.

Advertisement

ಈ ವರ್ಷ ಗ್ಯಾರಂಟಿ ಯೋಜನೆಗೆ 38 ಸಾವಿರ ಕೋಟಿ ನೀಡಲಾಗಿದೆ. ಸಂಪನ್ಮೂಲ ಕ್ರೋಢೀಕರಣ ಮಾಡಲಾಗಿದೆ. ಮುಂದಿ‌ನ ವರ್ಷ 58 ಸಾವಿರ ಕೋಟಿ ಕೊಡುತ್ತೆವೆ. ಯಾವುದೇ ಕಾರಣದಿಂದ ‌ಗ್ಯಾರಂಟಿ ನಿಲ್ಲಿಸಲ್ಲ. ಮುಂದುವರೆಯುತ್ತವೆ‌ ಐದು ವರ್ಷದ ಅವಧಿಯಲ್ಲಿ ಐದು ಗ್ಯಾರಂಟಿ ಮುಂದುವರೆಯಲಿವೆ ಎಂದರು.

ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ್ದಾರೆ. ಹಾಗಾಗಿ ನಿಮಗೆಲ್ಲರಿಗೂ ಅಭಿನಂದನೆ. ನಿಮ್ಮೆಲ್ಲರ ಆಶೀರ್ವಾದದಿಂದ ಎರಡನೆ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಅಧಿಕಾರಕ್ಕೆ ಬಂದ ನಂತರ ಎಲ್ಲಾ ಜನಾಂಗಕ್ಕೂ ಅನುಕೂಲ ಮಾಡಲಾಗಿದೆ. ಕಾಂಗ್ರೆಸ್ ಕೊಟ್ಟ ಮಾತಿನಂತೆ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದೇವೆ. ಇದರ ಜೊತೆಗೆ ಇನ್ನೂ 20ರಿಂದ 30 ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ಕೊಟ್ಟಿದ್ದೇವೆ ಎಂದರು‌

ಉಪಮುಖ್ಯ  ಡಿ.ಕೆ ಶಿವಕುಮಾರ್ ಮಾತನಾಡಿ, ಜನರಿಗೆ ಸರ್ಕಾರದ ಕಾರ್ಯಕ್ರಮವನ್ನು  ಎಂಬ ಹಿನ್ನೆಲೆಯಲ್ಲಿ  ಕೋಟ್ಯಾಂತರ ರೂ. ವೆಚ್ಚದ ಅದ್ಬುತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಲ್ಪತರು ನಾಡು ಅನೇಕ ಹಿರಿಮೆಯನ್ನು ಹೊಂದಿದೆ. ಧಾರ್ಮಿಕ ಕ್ಷೇತ್ರವಾಗಿದ್ದು, ತುಮಕೂರು ಜಿಲ್ಲೆ ಎರಡನೇ ಬೆಂಗಳೂರು ಜಿಲ್ಲೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ತುಮಕೂರಿಗೆ ತನ್ನದೇ ಆದ ಶಕ್ತಿಯಿದೆ. ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಮಾಡಬೇಕಿದೆ. ಹಾಗಾಗಿ ಮುಂದಿನ 50ವರ್ಷಕ್ಕೆ ಹೊಸ ಬೆಂಗಳೂರು ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳಬೇಕು. ಬೆಂಗಳೂರು ನಗರವನ್ನು ವಿಸ್ತರಣೆ ‌ಮಾಡಬೇಕು ಅಂದರೆ ಬೆಂಗಳೂರಿನ ಹಾಸುಪಾಸುಗಳ ಪ್ರದೇಶವನ್ನು ಅಭಿವೃದ್ಧಿ ಮಾಡಬೇಕು. ಹಾಗಾಗಿ ತುಮಕೂರು  ಜಿಲ್ಲೆಯಲ್ಲಿ ಈ ಕಾರಿಡಾರ್ ಗಳಲ್ಲಿ ಅಭಿವೃದ್ಧಿ ಮಾಡಬೇಕಿದೆ. ಹೆಚ್ಚು ಒತ್ತು ಕೊಡಬೇಕಿದೆ ಎಂದರು.

136 ಜನ ಶಾಸಕರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಗೆ ಅಧಿಕಾರಿ ಕೊಟ್ಟಿದ್ದೀರಾ. ಐದು ಗ್ಯಾರಂಟಿ ಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ತಲುಪುತ್ತಿದೆ ಎಂದರು.

ಸಿದ್ದರಾಮಯ್ಯ ಅವರ ಕನಸಿನ ಗ್ಯಾರಂಟಿಯಿಂದಾಗಿ ದೊಡ್ಡ ಬದಲಾವಣೆಯಾಗಿದೆ. ಆರ್ಥಿಕ ಶಕ್ತಿ ತಂದಿದೆ.  ನಾವು ಬರಿ ಗ್ಯಾರಂಟಿ ಯೋಜನೆ ಬಗ್ಗೆ ಅಷ್ಟೆ ಅಲೋಚನೆ ಮಾಡುತ್ತಿಲ್ಲ. ಇನ್ನೂ ಹಲವು ಕಾರ್ಯಕ್ರಮ ಆಯೋಜನೆಗೆ ಚಿಂತನೆ ಮಾಡಲಾಗಿದೆ ಎಂದರು.

ನಾನು ತುಮಕೂರಿಗೆ ಬಂದಾಗ ಪಾವಗಡ ಸೋಲಾರ್ ಪಾರ್ಕ್ ನೆನಪಿಗೆ ಬರುತ್ತದೆ. ಇನ್ನೂ 10000 ಹೆಕ್ಟೇರ್ ನಲ್ಲಿ ಸೋಲಾರ್ ಪಾರ್ಕ್ ವಿಸ್ತರಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆ ತುಮಕೂರು ಜಿಲ್ಲೆಯಲ್ಲಿ ಕಾಲಿಟ್ಟಿದೆ. 22 ಸಾವಿರ ಕೋಟಿ ವೆಚ್ಚದ ಯೋಜನೆಯಿಂದ ಜಿಲ್ಲೆಗೆ ನೆರವಾಗಲಿದೆ. ಭದ್ರ ಮೇಲ್ದಂಡೆ ಯೋಜನೆಗೆ ‌ನೆರವುಯ ಕೊಡುತ್ತೇವೆ ಎಂದಿತ್ತು. ಆದರೆ ಕೇಂದ್ರ ಸರ್ಕಾರ.  ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ನುಡಿದರು.

ಗೌರಿಶಂಕರ್ ನಮ್ಮ ಶಕ್ತಿಯನ್ನು ಬಲಪಡಿಸಿದ್ದಾರೆ. ಹಾಗೇ ಎಸ್.ಆರ್. ಶ್ರೀನಿವಾಸ್ ಸಹ ನಮಗೆ ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.‌

ಗೃಹ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವ ಡಾ.ಜಿ.‌ಪರಮೇಶ್ವರ್ ಮಾತನಾಡಿ, ಶೋಷಿತರು, ಬಡವರ ಜೀವನಕ್ಕೆ ಕಷ್ಟವಾಗಬಾರದೆಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ  575373 ಫಲಾನುಭವಿಗಳಿಗೆ 546 ಕೋಟಿ ಹಣ ನೀಡಲಾಗಿದೆ. ಶಕ್ತಿಯೋಜನೆಯಡಿ  3.87 ಲಕ್ಷ  ಫಲಾನುಭವಿಗಳು ಸೌಲಭ್ಯ ಪಡೆದಿದ್ದು, ಇದಕ್ಕಾಗಿ 110 ಕೋಟಿ ಖರ್ಚಾಗಿದೆ. ಅಂತೆಯೇ 6.86 ಸಾವಿರ ಫಲಾನುಭವಿಗಳು ವಿದ್ಯುತ್ ಭಾಗ್ಯ ಯೋಜನೆ ಸೌಲಭ್ಯ ಪಡೆದಿದ್ದಾರೆ. ಇನ್ನು ಅನ್ನಭಾಗ್ಯಯೋಜನೆ  5 ಕೆಜಿ ಅಕ್ಕಿ ನೀಡಲಾಗುತ್ತಿದ್ದ, ಉಳಿದ 5 ಕೆಜೆ ಅಕ್ಕಿಗೆ ಹಣವನ್ನು ಕೊಡಲಾಗುತ್ತಿದೆ. ಇದರ ಸೌಲಭ್ಯವನ್ನು 5.98 ಸಾವಿರ ಜನ ಅನುಭವ‌ಪಡೆದುಕೊಂಡಿದ್ದಾರೆ ಯುವನಿಧಿ ಯೋಜನೆಯಡಿ ನೋಂದಣಿ ಆರಂಭವಾಗಿದ್ದು 3.400 ನೋಂದಣಿಯಾಗಿದೆ ಎಂದರು.

ಸ್ಮಾರ್ಟ್ ಸಿಟಿಯೋಜನೆಯಡಿ ತುಮಕೂರು ನಗರದಲ್ಲಿ 35 ವಾರ್ಡ್ ಗಳಲ್ಲಿ 6 ವಾರ್ಡ್ ಗಳಿಗೆ ಸ್ಮಾರ್ಟ್ ಸಿಟಿ ಹಣ ಬಂದಿದೆ. ಉಳಿದ ವಾರ್ಡ್ ಗಳು ಅಭಿವೃದ್ಧಿಯಾಗಿಲ್ಲ. ಹಾಗಾಗಿ ಈ ಬಜೆಟ್ ನಲ್ಲಿ 500‌ಕೋಟಿ ಅನುದಾನ ನೀಡಬೇಕು. ಬೆಂಗಳೂರು ಪರ್ಯಾಯ ಬೆಳೆಯುತ್ತಿರುವ ತುಮಕೂರಿಗೆ ಬೆಂಗಳೂರಿನಿಂದ ಮೆಟ್ರೊ ಯೋಜನೆ ಮಂಜೂರು ಮಾಡಬೇಕು. ಈಗಾಗಲೇ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಹಿಂದಿನ ಸರ್ಕಾರ ತುಮಕೂರು ವಿಶ್ವವಿದ್ಯಾಲಯಕ್ಕೆ ಯಾವುದೇ ಹಣ ಕೊಟ್ಟಿಲ್ಲ. ಹಾಗಾಗಿ 200 ಕೋಟಿ ಕೊಡಬೇಕು ಎಂದರು.

ಏಷ್ಯಾದಲ್ಲಿ ಎತ್ತರದ ಮಧುಗಿರಿ ಏಕಶಿಲಾ ಬೆಟ್ಟವಿದೆ. ಅದಕ್ಕೆ ರೂಪ್ ವೇ ಮಾಡಲು ಅನುದಾನ ಕೊಡಬೇಕು. ಕೈಗಾರಿಕಾ ಪ್ರದೇಶ ವಸಂತ ನರಸಾಪುರಕ್ಕೆ ಇಂಟಿಗ್ರೇಟೆಡ್ ಟೌನ್ ಶಿಪ್ ಕೊಡಬೇಕು. ಭದ್ರ ಮೇಲ್ದಂಡೆ ಯೋಜನೆ ನೆನೆಗುದಿಗೆ ಬಿದ್ದಿದೆ‌ ಅದಕ್ಕೆ ಅನುದಾನ ಕೊಡಬೇಕು ಎಂದು ಸಚಿವರು ಮುಖ್ಯ ಮಂತ್ರಿಯವರಲ್ಲಿ ಮನವಿ ಮಾಡಿದರು.

ಜಿಲ್ಲಾಡಳಿತದಿಂದ ವಸತಿಯೋಜನೆ, ಹಳ್ಳಿಗಳಿಗೆ‌ ಯಾವುದೇ ಅನುದಾನ ಸಿಗುತ್ತಿಲ್ಲ. ಹಾಗಾಗಿ ಲೆಕ್ಕ ಶೀರ್ಷಿಕೆಯಲ್ಲಿ 200 ಕೋಟಿ ಕೊಡಬೇಕು ಎಂದರು.

ಜಿಲ್ಲಾಡಳಿತ ಭವನಕ್ಕೆ 3 ಕೋಟಿ ಮಂಜೂರು ಮಾಡಬೇಕು ಎಂದ ಅವರು ತುಮಕೂರಿಗೆ ಎತ್ತಿನಹೊಳೆ ಯೋಜನೆ ಮೂಲಕ ಕುಡಿಯುವ ನೀರನ್ನು ಕೊಡಲಾಗಿದೆ ಎಂದು  ಜನ ನಿಮ್ಮನ್ನು ಸ್ಮರಿಸಿಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಅವರನ್ನು ಹೊಗಳಿದರು.

ಸಮಾರಂಭದಲ್ಲಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಹಲವು ಸಚಿವರು ಇದ್ದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ.ಸಿ.ಇ.ಒ ಜೆ.ಪ್ರಭು, ಪಾಲಿಕೆಯ ಆಯುಕ್ತೆ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next