Advertisement

CM Siddaramaiah ತಪ್ಪು ಮಾಡಿಲ್ಲ, ಬೆಂಬಲ ಕೊಡಿ

11:45 PM Aug 01, 2024 | Team Udayavani |

ಬೆಂಗಳೂರು: ರಾಜ್ಯಪಾಲರ ಶೋಕಾಸ್‌ ನೋಟಿಸ್‌ ಬೆನ್ನಲ್ಲೇ ಗುರುವಾರ ಸಂಪುಟ ಸಹೋದ್ಯೋಗಿ ಗಳೊಂದಿಗೆ ಉಪಾಹಾರ ಕೂಟ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಡಾ ಅಥವಾ ವಾಲ್ಮೀಕಿ ಹಗರಣಗಳಲ್ಲಿ ನನ್ನ ಪಾತ್ರ ಇಲ್ಲ ಎಂಬುದನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟರಲ್ಲದೆ, ಇದರ ವಿರುದ್ಧ ನಾನು ಕಾನೂನು ಸಮರಕ್ಕೆ ಸಿದ್ಧನಿದ್ದೇನೆ. ನೈತಿಕ ಬೆಂಬಲ ಕೊಡಿ ಎಂದು ಮನವಿ ಮಾಡಿದ್ದಾರೆ.

Advertisement

ಕಳೆದ ಎರಡು ದಿನಗಳಿಂದ ಹೊಸದಿಲ್ಲಿಯಲ್ಲಿ ಬೀಡು ಬಿಟ್ಟಿದ್ದ ಸಿಎಂ, ರಾಜ್ಯಪಾಲರ ಪತ್ರಕ್ಕೆ ಉತ್ತರಿಸಲು ಗುರುವಾರ ಕೊನೆಯ ದಿನವಾದ್ದರಿಂದ ಬುಧವಾರ ರಾತ್ರಿಯೇ ಬೆಂಗಳೂರಿಗೆ ಮರಳಿದರು. ಗುರುವಾರ ಬೆಳಗ್ಗೆ ತಮ್ಮ ನಿವಾಸ ಕಾವೇರಿಯಲ್ಲಿ ಸಚಿವರಿಗೆ ಉಪಾಹಾರಕ್ಕೆ ಆಹ್ವಾನಿಸಿದರು. ಬೆಳಗ್ಗೆ 9ರಿಂದ 11.30ರ ವರೆಗೆ ರಾಜ್ಯಪಾಲರ ನೋಟಿಸ್‌ ವಿಚಾರ ಚರ್ಚಿಸಿದರು. ಮುಡಾ ಮತ್ತು ವಾಲ್ಮೀಕಿ ನಿಗಮದ ಪ್ರಕರಣಗಳಲ್ಲಿ ಬಿಜೆಪಿ ಅನಗತ್ಯ ಅಪಪ್ರಚಾರ ಮಾಡುತ್ತಿದೆ. ಎಲ್ಲವೂ ಸುಳ್ಳು ಆರೋಪಗಳು. ಇದರ ವಿರುದ್ಧ ನಾವು ಯಾವುದೇ ಮುಲಾಜು ತೋರದೆ ಗಟ್ಟಿಯಾಗಿ ಹೋರಾಟ ನಡೆಸಬೇಕು ಎಂದಿದ್ದಾರೆ.

ಬೇರೆ ರಾಜ್ಯಗಳಲ್ಲಿ ಮಾಡಿದಂತೆ ಕರ್ನಾಟಕದಲ್ಲೂ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ರಾಜಭವನ ದುರ್ಬಳಕೆ ಆಗುತ್ತಿದೆ. ಕೇಂದ್ರ ಸರಕಾರವು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್‌ನ ಈ ಪ್ರಯತ್ನಗಳನ್ನು ನಾವೆಲ್ಲರೂ ಸೇರಿ ವಿಫ‌ಲಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದಕ್ಕೆ ಬಹುತೇಕ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಪಾಳಯದಲ್ಲಿ ತಳಮಳ, ಅಧಿಕಾರಿ
ವರ್ಗದಲ್ಲೂ ಸಿಎಂ ಕುರ್ಚಿಯದ್ದೇ ಚರ್ಚೆ
ಬೆಂಗಳೂರು: ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ಗುರುವಾರ ಇಡೀ ದಿನ ತುರುಸಿನ ಚಟುವಟಿಕೆಗಳ ಕೇಂದ್ರವಾಗಿತ್ತು. ಅದೆಲ್ಲವೂ ರಾಜ್ಯಪಾಲರು ಸಿಎಂಗೆ ನೀಡಿದ ಶೋಕಾಸ್‌ ನೋಟಿಸ್‌ ಸುತ್ತಲಿನಲ್ಲೇ ಗಿರಕಿ ಹೊಡೆಯುತ್ತಿತ್ತು.

Advertisement

ಮುಖ್ಯಮಂತ್ರಿ ವಿರುದ್ಧ ಕೇಳಿಬಂದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಶೋಕಾಸ್‌ ನೋಟಿಸ್‌ ನೀಡಿದ್ದು, ಏಳು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದ್ದರು. ಆ ಗಡುವು ಗುರುವಾರವೇ ಅಂತಿಮಗೊಳ್ಳುವುದಿತ್ತು. ಈ ಹಿನ್ನೆಲೆಯಲ್ಲಿ ಒಂದೆಡೆ ಇಡೀ ಸರಕಾರ ನೋಟಿಸ್‌ಗೆ ಸೂಕ್ತ ಉತ್ತರ ನೀಡುವುದರ ಹಿಂದೆ ಬಿದ್ದಿತ್ತು. ಹಿರಿಯ ಸಚಿವರೆಲ್ಲರೂ ಸುದೀರ್ಘ‌ ನಾಲ್ಕೈದು ತಾಸು ಇದೇ ನೋಟಿಸ್‌ ವಿಚಾರವಾಗಿ ಚರ್ಚೆ ನಡೆಸಿದರು. ಪರಿಣಾಮ ವಿಧಾನಸೌಧದ ಮೂರನೇ ಮಹಡಿ ಮಳೆ-ಗಾಳಿಯ ನಡುವೆಯೂ ಈ ಎಲ್ಲ ರಾಜಕೀಯ ಚಟುವಟಿಕೆಗಳಿಂದ ಕಾವೇರಿತ್ತು.

ವಿಶೇಷವೆಂದರೆ ಇಡೀ ಬೆಳವಣಿಗೆಯ ಕೇಂದ್ರಬಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಇದರಿಂದ ಹೊರಗುಳಿದಿದ್ದರು. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಲ್ಲೂ ಈ ಬೆಳವಣಿಗೆ ತಳಮಳ ಸೃಷ್ಟಿಸಿತ್ತು. ಇದಕ್ಕೆ ಪೂರಕವಾಗಿ ಸಭೆಯ ತೀರ್ಮಾನದ ಬಗ್ಗೆ ಆಗಾಗ್ಗೆ ತಮ್ಮ ಮೇಲಧಿಕಾರಿಗಳನ್ನು ಭೇಟಿಯಾಗಿ ಕೇಳುತ್ತಿರುವುದು ಕಂಡುಬಂತು.

ಕಾಗದ ಪತ್ರ ಸಿದ್ಧಪಡಿಸಲು ಪೊನ್ನಣ್ಣಗೆ ಸೂಚನೆ
ದಿಲ್ಲಿಯಲ್ಲಿ ಕಪಿಲ್‌ ಸಿಬಲ್‌ ಸೇರಿದಂತೆ ಹಿರಿಯ ವಕೀಲರನ್ನು ಸಂಪರ್ಕಿಸಿ ಸಲಹೆ ಪಡೆದಿದ್ದ ಸಿಎಂ, ಉಪಾಹಾರ ಕೂಟದ ನೆಪದಲ್ಲಿ ನಡೆದ ಸಭೆಯಲ್ಲಿ ತಮ್ಮ ಕಾನೂನು ಸಲಹೆಗಾರ ಎ.ಎಸ್‌. ಪೊನ್ನಣ್ಣ ಹಾಗೂ ಹೈಕೋರ್ಟ್‌ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರಿಂದಲೂ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಅಗತ್ಯ ಕಾಗದ-ಪತ್ರಗಳ ಕರಡು ಸಿದ್ಧಪಡಿಸುವಂತೆ ಪೊನ್ನಣ್ಣಗೆ ಸೂಚಿಸಿದ್ದಾರೆ.

ಪ್ರಾಸಿಕ್ಯೂಶನ್‌ಗೆ
ತಡೆ ತರಲು ಚರ್ಚೆ
ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಪ್ರಕರಣಗಳು ರಾಜಕೀಯ ಪ್ರೇರಿತವಾಗಿವೆ. ಯಾವ ದಾಖಲೆಗಳಲ್ಲೂ ನನ್ನ ಹೆಸರಿಲ್ಲ. ನನ್ನ ಸಹಿ ಎಲ್ಲೂ ಇಲ್ಲ. ಯಾರಿಗೂ ಸೂಚನೆ, ನಿರ್ದೇಶನ ಕೊಟ್ಟಿರುವ ಬಗ್ಗೆ ದಾಖಲೆಗಳಿಲ್ಲ. ಏನೂ ಇಲ್ಲದೆ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಡಲಾಗುತ್ತದೆಯೇ? ಅದು ಕಾನೂನುಬಾಹಿರ ಆಗುವುದಿಲ್ಲವೇ ಎಂಬ ಬಗ್ಗೆ ಚರ್ಚಿಸಿರುವ ಸಿಎಂ, ಹಾಗೊಂದು ವೇಳೆ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟರೆ ಸೆಕ್ಷನ್‌ 16 (ಸಿ) (ಸಿ) ಅನ್ವಯ ತಡೆಯಾಜ್ಞೆ ತರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next