Advertisement

Karnataka: ತೆರಿಗೆ ಸಂಗ್ರಹ ಗುರಿ ನೀಡಿದ ಸಿಎಂ ಸಿದ್ದರಾಮಯ್ಯ

01:50 AM Dec 04, 2024 | Team Udayavani |

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯು ನವೆಂಬರ್‌ ಅಂತ್ಯದವರೆಗೆ ನೀಡಿದ್ದ ತೆರಿಗೆ ಸಂಗ್ರಹದ ಗುರಿ (56,317 ಕೋಟಿ ರೂ.) ಸಾಧಿಸು ವಲ್ಲಿ ಹಿಂದೆ ಬಿದ್ದಿದ್ದು, ಇದುವರೆಗಿನ ಸಂಗ್ರಹ 53,103 ಕೋಟಿ ರೂ.ವನ್ನು ಸಂಗ್ರಹಿಸಲು ಮಾತ್ರವೇ ಶಕ್ತವಾಗಿದೆ. ಆದರೆ ಸರಕಾರಕ್ಕೆ ಆದಾಯ ತಂದುಕೊಡುವ ಉಳಿದ ಇಲಾಖೆ ಗಳು ನಿರೀಕ್ಷಿತ ಗುರಿ ತಲುಪಿವೆ.

Advertisement

ವಾಣಿಜ್ಯ ತೆರಿಗೆ, ಅಬಕಾರಿ, ಮುದ್ರಾಂಕ ಮತ್ತು ನೋಂದಣಿ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರಕಾರದ ಎಲ್ಲ ಸಂಪನ್ಮೂಲ ಸಂಗ್ರಹ ಇಲಾಖೆಗಳು ಹಣಕಾಸು ವರ್ಷದ ಅಂತ್ಯಕ್ಕೆ ಕಡ್ಡಾಯವಾಗಿ ತಮ್ಮ ಗುರಿ ತಲುಪಬೇಕು ಎಂದು ಸೂಚನೆ ನೀಡಿದ್ದಾರೆ.

ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಸಂಪನ್ಮೂಲ ಸಂಗ್ರಹ ಇಲಾಖೆಗಳು ಇದುವರೆಗೆ ಉತ್ತಮ ಸಾಧನೆ ಮಾಡಿವೆ. ವಾಣಿಜ್ಯ ತೆರಿಗೆ ಇಲಾಖೆಯು ಶೇ. 100 ಬಜೆಟ್‌ ಗುರಿ ತಲುಪಲು ಅಗತ್ಯ ಕ್ರಮ ಕೈಗೊಳ್ಳಬೇಕು, ಅಬಕಾರಿ ಇಲಾಖೆಯ ಜಾಗೃತ ದಳ ಇನ್ನಷ್ಟು ಚುರುಕಾಗಬೇಕು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾನೂನು ಬಾಹಿರ ನೋಂದಣಿಗೆ ಕಡಿವಾಣ ಹಾಕಬೇಕು, ಅರಣ್ಯ ಮತ್ತು ಗಣಿ ಇಲಾಖೆಯ ಮಧ್ಯೆ ಸಮನ್ವಯತೆ ಮೂಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ವಾಣಿಜ್ಯ ಇಲಾಖೆ ಶೇ. 94 ಸಾಧನೆ
ವಾಣಿಜ್ಯ ಇಲಾಖೆಗೆ ನವೆಂಬರ್‌ ಅಂತ್ಯದವರೆಗೆ ವಾಣಿಜ್ಯ ತೆರಿಗೆ ಸಂಗ್ರಹಣೆ ಗುರಿ 56,317 ಕೋಟಿ ರೂ. ನೀಡಲಾಗಿತ್ತು. ಇದುವರೆಗೆ 53,103 ಕೋಟಿ ರೂ ತೆರಿಗೆ ಸಂಗ್ರಹಿಸಿ ಶೇ. 94ರಷ್ಟು ಸಾಧನೆ ಮಾಡಿದೆ. ಮಲೆನಾಡು ಮತ್ತು ಮೈಸೂರು ವಿಭಾಗದಲ್ಲಿ ತೆರಿಗೆ ಸಂಗ್ರಹ ನಿಗದಿತ ಗುರಿಗಿಂತ ಕಡಿಮೆಯಿದ್ದು ಎಲ್ಲ ವಿಭಾಗಗಳು ಮುಂದಿನ ನಾಲ್ಕು ತಿಂಗಳಲ್ಲಿ ಗುರಿಯನ್ನು ಕಡ್ಡಾಯವಾಗಿ ಸಾಧಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಇದರ ಜತೆಗೆ ಜಿಎಸ್ಟಿ ಸಂಗ್ರಹವನ್ನು ಹೆಚ್ಚಿಸಬೇಕು. ಲೆಕ್ಕಪರಿಶೋಧನೆ ಮತ್ತು ನ್ಯಾಯನಿರ್ಣಯದಿಂದ ಪ್ರಸ್ತುತ ಹಣಕಾಸು ಸಾಲಿನಲ್ಲಿ 4671 ಕೋಟಿ ರೂ. ತೆರಿಗೆ ಸಂಗ್ರಹ ಗುರಿಯಿದ್ದು, ನವೆಂಬರ್‌ ಅಂತ್ಯದವರೆಗೆ 3,076.86 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಆದ್ದರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ಸ್ವೀಕರಿಸಿದ ಮನವಿಗಳನ್ನು ವಿಲೇವಾರಿ ಮಾಡಿ ತೆರಿಗೆ ಸಂಗ್ರಹ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

Advertisement

ರಾಜ್ಯ ಜಿಎಸ್ಟಿ ಸಂಗ್ರಹದಲ್ಲಿ ಶೇ. 15ರ ಬೆಳವಣಿಗೆ ದರ ಸಾಧಿಸಿದೆ. ನವೆಂಬರ್‌ ಅಂತ್ಯದವರೆಗೆ13,722 ಕೋಟಿ ರೂ. ಜಿಎಸ್ಟಿ ಸಂಗ್ರಹಿಸ ಲಾಗಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಜಾಗೃತ ದಳವನ್ನು ಚುರುಕುಗೊಳಿಸಿ
ಅಬಕಾರಿ ಇಲಾಖೆಗೆ ಈ ಹಣಕಾಸು ವರ್ಷದಲ್ಲಿ 38,525 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹ ಗುರಿ ನಿಗದಿ ಪಡಿಸಲಾಗಿದ್ದು, ನವೆಂಬರ್‌ ಅಂತ್ಯದವರೆಗೆ ರೂ.23,600 ಕೋಟಿ ರೂ. ಸಂಗ್ರಹಿಸಲಾಗಿದ್ದು, ಶೇ. 61.26 ಗುರಿ ಸಾಧಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ರೂ.1432.23 ಕೋಟಿ ರಾಜಸ್ವ ಸಂಗ್ರಹದಲ್ಲಿ ಹೆಚ್ಚಳವಾಗಿದ್ದು, ಶೇ. 6.46 ಬೆಳವಣಿಗೆ ದರ ಸಾಧಿಸಲಾಗಿದೆ. ರಾಜಸ್ವ ಸಂಗ್ರಹ ಹೆಚ್ಚಿಸಲು ಜಾಗೃತ ದಳ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕು. ಅಬಕಾರಿ ಇಲಾಖೆಯಲ್ಲಿ ಖಾಲಿಯಿರುವ ಗ್ರೂಪ್‌ ಸಿ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳ ಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಾನೂನು ಬಾಹಿರ ನೋಂದಣಿಗೆ ಕಡಿವಾಣ ಹಾಕಿ
ರಾಜಸ್ವ ಸೋರಿಕೆಯನ್ನು ತಡೆಗಟ್ಟಿ, ರಾಜಸ್ವ ಸಂಗ್ರಹವನ್ನು ಹೆಚ್ಚಿಸಬೇಕು. ಕಾನೂನು ಬಾಹಿರ ನೋಂದಣಿಗಳಿಗೆ ಕಡಿವಾಣ ಹಾಕಿ, ರಾಜಸ್ವ ಸಂಗ್ರಹವನ್ನು ವ್ಯವಸ್ಥಿತಗೊಳಿಸಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಮುಖ್ಯಮಂತ್ರಿಗಳು ಇ-ಖಾತಾ ನೀಡುವ ಪ್ರಕ್ರಿಯೆಯಲ್ಲಿನ ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next