Advertisement
ನಗರದ ಮಹಾರಾಜ ಪಿಯು ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 170 ಕೋಟಿ ರೂಪಾಯಿ ವೆಚ್ಚದ ಮಹಾರಾಣಿ ಮಹಿಳಾ ವಿಜ್ಞಾನ ಮತ್ತು ಕಲಾ ಕಾಲೇಜಿನ ನೂತನ ವಸತಿ ನಿಲಯ ಕಟ್ಟಡ ಹಾಗೂ ವಿಜ್ಞಾನ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಕಾಮಗಾರಿ, 49 ಕೋಟಿ ರೂ ವೆಚ್ಚದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ 3, 4ನೇ ಅಂತಸ್ತಿನ ಕಟ್ಟಡ, ವಸತಿ ನಿಲಯದ 3ನೇ ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶೂದ್ರರಂತೆ ಇಡೀ ಮಹಿಳಾ ಕುಲವನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಾಗಿತ್ತು. ಈಗ ಹೆಣ್ಣು ಮಕ್ಕಳೇ ಶಿಕ್ಷಣದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಕಾರ್ಯಕ್ರಮಗಳನ್ನು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಶಕ್ತಿ ಯೋಜನೆಯಲ್ಲಿ ಇದುವರೆಗೆ 325 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದರು. ಶಿಕ್ಷಣದಿಂದ ಮಾತ್ರ ಮಹಿಳೆಯರು, ಯುವತಿಯರು ಸ್ವಾಭಿಮಾನಿ ಮತ್ತು ಸ್ವಾವಲಂಬಿಗಳಾಗಲು ಸಾಧ್ಯ. ಹೀಗಾಗಿ ಮಹಿಳಾ ಸಬಲೀಕರಕ್ಕೆ ನಮ್ಮ ಸರ್ಕಾರಕ್ಕೆ ಸದಾ ಬದ್ಧವಾಗಿದೆ.
Related Articles
Advertisement
1700 ವಿದ್ಯಾರ್ಥಿಗಳಿಗೆ ಅವಕಾಶ:ನಾನು ಓದಿದ್ದು ಮೈಸೂರಿನಲ್ಲೆ . ಮೈಸೂರಿನ ಹಾಗೂ ಕಾಲೇಜಿನ ಸಮಸ್ಯೆಗಳ ಅರಿವಿತ್ತು. ಇದಕ್ಕೆ ಹೊಸ ರೂಪ ಕೊಡಬೇಕೆಂದು ನೂತನ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಶಿಥಿಲಾವಸ್ಥೆಯಲ್ಲಿದ್ದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಇರಬೇಕಿತ್ತು. ಅದಕ್ಕಾಗಿ 1700 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಹೆಣ್ಣು ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸರ್ಕಾರದ ಉದ್ದೇಶ. ಹೆಣ್ಣೊಬ್ಬಳು ವಿದ್ಯಾವಂತಳಾದರೆ ಶಾಲೆಯೊಂದು ತೆರೆದಂತೆ. ಅದಕ್ಕಾಗಿ ಸಮಾಜದ ಪ್ರತಿಯೊಬ್ಬ ಹೆಣ್ಣು ಮಗಳೂ ವಿದ್ಯಾವಂತಳಾಗಬೇಕು. ಹೆಣ್ಣು ಮಕ್ಕಳು ನೂರಕ್ಕೆ ನೂರು ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು. 9 ಸಾವಿರ ವಿದ್ಯಾರ್ಥಿನಿಯರು ಅಭ್ಯಾಸ:
ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ನೂತನ ಕಟ್ಟಡ, ಹಾಸ್ಟೆಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಪುರಾತತ್ವ ಇಲಾಖೆ ಒಪ್ಪಿದ ವಿನ್ಯಾಸದಲ್ಲೇ ಇಂದಿನ ಕಾಲಘಟ್ಟಕ್ಕೆ ಏನೇನು ಸೌಲಭ್ಯ ಬೇಕು ಎಲ್ಲವನ್ನೂ ನೂತನ ಕಟ್ಟಡ ಒಳಗೊಂಡಿದೆ. ಕಾಲೇಜಿನ ಮುಂದೆ ಇರುವ ಪಾರಂಪರಿಕಾ ಕಟ್ಟಡವನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ. ಹಿಂದೆ ಇರುವ ಜಾಗದಲ್ಲಿ ಹೊಸಕಟ್ಟಡ ಕಟ್ಟಲಾಗುತ್ತದೆ. ಜತೆಗೆ ರಾಜ್ಯದಲ್ಲೇ ಮಾದರಿಯಾಗುವಂತಹ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ. ಮೈಸೂರಿನಲ್ಲಿ ಮಹಾರಾಜರ ಹೆಸರು ಚಿರಸ್ಥಾಯಿಯಾಗಿರುವಂತೆ ಸಿದ್ದರಾಮಯ್ಯ ಹೆಸರು ಚರಿತ್ರೆಯಲ್ಲಿ ಅಜರಾಮರವಾಗಿ ಉಳಿಯುತ್ತದೆ. 24 ತಿಂಗಳೊಳಗೆ ನೂತನ ಕಟ್ಟಡಗಳು ಉದ್ಘಾಟನೆಯಾಗಲಿದ್ದು, ಮೂರು ಕಾಲೇಜುಗಳಿಂದ 9 ಸಾವಿರ ವಿದ್ಯಾರ್ಥಿನಿಯರು ಅಭ್ಯಾಸ ಮಾಡಲಿದ್ದಾರೆ ಎಂದರು. ಪ್ರಸ್ತುತ ಹಾಸ್ಟೆಲ್ ನಲ್ಲಿರುವ 600 ವಿದ್ಯಾರ್ಥಿಗಳಿಗೆ ಹೊಸ ಕಟ್ಟಡ ನಿರ್ಮಾಣವಾಗುವ ತನಕ ತಾತ್ಕಾಲಿಕ ವ್ಯವಸ್ಥೆ ಮಾಡಬೇಕಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸ್ಥಳೀಯ ಶಾಸಕ ಹರೀಶ್‌ಗೌಡ ಇದರ ಕಡೆ ಗಮನ ಹರಿಸಿ, ಹೆಣ್ಣು ಮಕ್ಕಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತೆ ಮಂಜುಶ್ರೀ, ಕೆಎಚ್‌ಬಿ ಆಯುಕ್ತೆ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿ.ಪಂ ಸಿಇಒ ಕೆ.ಎಂ.ಗಾಯತ್ರಿ ಮತ್ತಿತರರು ಹಾಜರಿದ್ದರು. ಪ್ರತಿಯೊಬ್ಬರು ಸಂವಿಧಾನ ಓದಬೇಕು. ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಮಾನವೀಯತೆ ಮೈಗೂಡಿಸಿಕೊಂಡು ವೈಚಾರಿಕವಾಗಿ ಬದುಕುವುದನ್ನು ಕಲಿಯಬೇಕು. ಶಿಕ್ಷಣವೆಂದರೆ ಕೇವಲ ಓದು -ಬರೆಯುವುದಲ್ಲ. ಜೀವನ ಮೌಲ್ಯಗಳನ್ನೂ ಕಲಿಯಬೇಕು. ವೈಚಾರಿಕ, ವೈಜ್ಞಾನಿಕ ಶಿಕ್ಷಣ ಇಂದಿನ ದಿನಮಾನದ ಅವಶ್ಯವಾಗಿದೆ.
-ಸಿದ್ದರಾಮಯ್ಯ, ಸಿಎಂ 5 ಮಂದಿಗೆ ವಿದೇಶಿ ವಿವಿಯಲ್ಲಿ ಕಲಿಕೆಗೆ ಅವಕಾಶ
ಮೈಸೂರು: ರಾಜ್ಯದ ಸರ್ಕಾರಿ ಕಾಲೇಜಿನಲ್ಲಿ ಪದವಿಗಳಿಸುವ ವಿದ್ಯಾರ್ಥಿಗಳಲ್ಲಿ ಐವರನ್ನು ಆಯ್ಕೆ ಮಾಡಿ ಯುಕೆ (ಯುನೈಟೆಡ್ ಕಿಂಗ್‌ಡಮ್)ಯ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಓದಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು. ಈ ನಿಟ್ಟಿನಲ್ಲಿ ಸರ್ಕಾರವು ಫಾರಿನ್ ಕಾಮನ್‌ವೆಲ್ತ್ ಡೆವಲಪ್‌ಮೆಂಟ್ ಕಚೇರಿಯೊಂದಿಗೆ ಒಡಂಬಂಡಿಕೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ. ಮುಂದಿನ ವರ್ಷದಿಂದ ಯೋಜನೆ ಜಾರಿಗೆ ಬರುತ್ತದೆ. ಇದರಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ರಾಜ್ಯ ಸರ್ಕಾರ 20 ಲಕ್ಷ ರೂಪಾಯಿ ಹಾಗೂ ಫಾರಿನ್ ಕಾಮನ್‌ವೆಲ್ತ್ ಡೆವಲಪ್‌ಮೆಂಟ್ ಕಚೇರಿಯು 20 ಲಕ್ಷ ರೂಪಾಯಿಯನ್ನು ವಿದ್ಯಾರ್ಥಿಗಳ ಓದಿನ ಖರ್ಚಿಗೆ ನೀಡುತ್ತವೆ. ಸರ್ಕಾರ ಈ ಯೋಜನೆಗೆ ವಾರ್ಷಿಕ ಒಂದು ಕೋಟಿ ರೂಪಾಯಿ ನೀಡುತ್ತದೆ ಎಂದರು. ನಮ್ಮ ಸರ್ಕಾರ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಿದೆ. 45 ಕಾಲೇಜುಗಳಲ್ಲಿ ಹೊಸ ಪದವಿ ಕೋರ್ಸ್‌ಳನ್ನು ಆರಂಭಿಸಲಾಗಿದೆ. ಕೌಶಲಧಾರಿತ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಪದವಿಯನ್ನು ಓದುತ್ತಲೇ ಈ ಕೋರ್ಸ್‌ಗಳನ್ನು ಮಾಡಬಹುದು. ಜೊತೆಗೆ ಸ್ಟೈಫಂಡ್ ಕೂಡ ಸಿಗುತ್ತದೆ ಎಂದರು. ರಾಜ್ಯದ 6 ವಿವಿಗಳ 30 ವಿದ್ಯಾರ್ಥಿಗಳನ್ನು ಲಂಡನ್ನಿಗೆ ಶೈಕ್ಷಣಿಕ ಅಧ್ಯಯನಕ್ಕೆ ಕಳುಹಿಸಲಾಗಿದೆ. ಅವರು ಇದೇ 23 ರಂದು ವಾಪಸ್ ಬರುತ್ತಾರೆ. ಅವರು ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ತಿಳಿದುಕೊಂಡು ನಮ್ಮಲ್ಲಿ ಹೇಗೆ ಅನುಷ್ಠಾನಗೊಳಿಸಬಹುದು ಎನ್ನುವುದು ತಿಳಿಸಲಿದ್ದಾರೆ ಎಂದರು. ಅಭಿವೃದ್ಧಿ ಮಾಡಿದ್ದೇ ಸಿದ್ದರಾಮಯ್ಯ
ಮೈಸೂರು: ಕೆಲವರು ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಟೀಕಿಸುತ್ತಿದ್ದಾರೆ. ಆದರೆ, ಅಭಿವೃದ್ಧಿ ಅಗಿರುವುದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಬಂದ ಮೇಲೆ ಎಂದು ಅರಸೀಕೆರೆ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು. ಹಿಂದೆ ಆಡಳಿತ ನಡೆಸಿದವರು ಒಂದೂವರ ಲಕ್ಷ ಕೋಟಿ ರೂಪಾಯಿ ಸಾಲ ಮಾಡಿ ಹೋಗಿದ್ದರು. ನೀರಾವರಿ ಇಲಾಖೆಯಲ್ಲೇ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲವಿತ್ತು. ಅವರು ಮಾಡಿದ ಸಾಲವನ್ನು ಸಿದ್ದರಾಮಯ್ಯ ತೀರಿಸುವ ಕೆಲಸ ಮಾಡುತ್ತಿದ್ದಾರೆ. ಇಂದು ಕೆಲವರು ಸರ್ಕಾರದ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಾರೆ. ಬಜೆಟ್ ಅಂದರೆ ಏನು? ಖರ್ಚು ಎಷ್ಟು, ಆದಾಯ ಎಷ್ಟು, ಆದಾಯ ಹೇಗೆ ಬರುತ್ತದೆ ಎನ್ನುವುದು ಗೊತ್ತಿಲ್ಲದಿದ್ದರೂ ಭಾಷಣ ಬಿಗಿಯುತ್ತಾರೆ. ಅಂತಹವರಿಗೆ ನಾನು ಹೇಳುವುದು ಇಷ್ಟೇ,ನೀವು ಮಾಡಿದ ಪಾಪದ ಫಲವನ್ನು ಸಿದ್ದರಾಮಯ್ಯ ತೀರಿಸುತ್ತಿದ್ದಾರೆ ಎಂದರು. ಗ್ಯಾರಂಟಿ ಜಾರಿ ಮಾಡಿ ಯಾವುದೇ ಅಭಿವೃದ್ಧಿ ಕೆಲಸ ನಿಲ್ಲದಂತೆ ಕಾರ್ಯ ನಿರ್ವಹಿಸುತ್ತಿ¨ªಾರೆ. ದೇವರಾಜ ಅರಸು ಅವರಂತೆ ಸಿದ್ದರಾಮಯ್ಯ ಇಂದು ಎಲ್ಲ ಕ್ಷೇತ್ರದಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅದು ಗೊತ್ತಿರುವವರಿಗೆ ಮಾತ್ರ ಗೊತ್ತಿದೆ. ಕಾಮಾಲೆ ಕಣ್ಣಿನವರಿಗೆ ಏನೂ ಮಾಡಲು ಆಗಲ್ಲ. ಸಮಯ ಬಂದಾಗ ಉತ್ತರ ಕೊಡೋಣ ಎಂದರು. ರಸ್ತೆಗೆ ಸಿದ್ದರಾಮಯ್ಯ ಹೆಸರು ನಾಮಕರಣ
ಮೈಸೂರು:ನಗರದಲ್ಲಿ ಉಳಿದುಕೊಳ್ಳಲು ಸೂಕ್ತ ಸೌಲಭ್ಯ ಇಲ್ಲದೇ ಇರುವ ಕಾರಣಕ್ಕೆ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯದೇ ಓದನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದರು. ಹೀಗಾಗಿ ಹಾಸ್ಟೆಲ್ ಕಟ್ಟಿಸಲಾಗುತ್ತಿದೆ ಎಂದು ಶಾಸಕ ಕೆ.ಹರೀಶ್ ಗೌಡ ತಿಳಿಸಿದರು. ಬಿಜೆಪಿ ಸರ್ಕಾರವಿದ್ದಾಗಲೇ ವಿಜ್ಞಾನ ಕಾಲೇಜಿನಲ್ಲಿ ಮೇಲ್ಛಾವಣಿ ಕುಸಿದ ಘಟನೆ ನಡೆಯಿತು. ಅವರು ಇತ್ತ ನೋಡಲೇ ಇಲ್ಲ. ಮಹಾರಾಣಿ ಕಾಲೇಜುಗಳ ಅಭಿವೃದ್ಧಿಗೆ ಬಿಡಿಗಾಸನ್ನೂ ಕೊಟ್ಟಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ಮೈಸೂರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಹಲವು ಆಸ್ಪತ್ರೆಗಳನ್ನು ನಿರ್ಮಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಆದ್ದರಿಂದ ಆಸ್ಪತ್ರೆಗಳು ಹೆಚ್ಚಾಗಿ ಇರುವ ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡಲು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.