Advertisement
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಬಹಿರಂಗವಾಗಿ ಆಕಾಂಕ್ಷೆ ವ್ಯಕ್ತಪಡಿಸಿದ್ದವರ ಜತೆಗೆ ಚರ್ಚೆ ನಡೆಸುವುದಕ್ಕಾಗಿಯೇ ಕೆಲವರಿಗೆ ಸಿಎಂ ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಉಪಾಹಾರ ಕೂಟಕ್ಕೆ ಬರುವಂತೆ ಸಂದೇಶ ರವಾನಿಸಿದ್ದರು. ಆದರೆ, ಕೊನೇ ಕ್ಷಣದಲ್ಲಿ ಇದು ರದ್ದಾಗಿದೆ. ಒಂದೊಮ್ಮೆ ಈ ಸಭೆ ನಡೆದರೆ ಬೇರೆ ಸಂದೇಶ ರವಾನೆಯಾಗುತ್ತದೆ ಎಂಬ ಸಲಹೆ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ಮುಂದೂಡಿಕೆ ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸಭೆ ಕರೆದು ನಂತರ ರದ್ದು ಮಾಡಿರುವುದಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಮುಡಾ ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ವಾದ ಮಂಡಿಸುವುದಕ್ಕೆ ಆಗಮಿಸಿದ್ದ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ , ತುರ್ತಾಗಿ ಸಿದ್ದರಾಮಯ್ಯ ಅವರ ಜತೆ ಚರ್ಚೆ ಮಾಡಬೇಕೆಂದು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಉಪಾಹಾರ ಕೂಟ ರದ್ದು ಪಡಿಸಿ ಸಿಂಘ್ವಿ ಭೇಟಿಗೆ ಸಿದ್ದರಾಮಯ್ಯ ತೆರಳಿದರು ಎಂದು ಹೇಳಲಾಗುತ್ತಿದೆ.
Related Articles
ಸಿಎಂ ಕಚೇರಿ ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿ ಆಧರಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಕ್ಕೂ ಸಿದ್ಧತೆ ನಡೆಸಿದ್ದಾರೆ. ಈ ವಿಚಾರಕ್ಕಾಗಿಯೇ ಅವರುಸಿಂಘ್ವಿ ಜತೆ ಚರ್ಚೆ ನಡೆಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.
Advertisement
ಯಾರ್ಯಾರಿಗೆ ಆಹ್ವಾನ?ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ, ಸತೀಶ್ ಜಾರಕಿಹೊಳಿ, ಡಾ| ಎಚ್.ಸಿ. ಮಹದೇವಪ್ಪ, ಡಾ| ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ ಸೇರಿ ಕೆಲ ಹಿರಿಯರಿಗೆ ಮಾತ್ರ ಈ ಉಪಾಹಾರ ಕೂಟಕ್ಕೆ ಕರೆ ನೀಡಲಾಗಿತ್ತು. ಸಿಎಂ ಕಾರ್ಯಾಲಯದಿಂದಲೇ ಕರೆ ಮಾಡಲಾಗಿತ್ತು. ಪ್ರತೀದಿನವೂ ನಾನು ಕೂಡಾ ಆಕಾಂಕ್ಷಿ ಎಂದು ಈ ನಾಯಕರು ನೀಡುತ್ತಿರುವ ಹೇಳಿಕೆಯಿಂದ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಉಪಾಹಾರ ಕೂಟ ಕರೆದು ವಿವಾದ ತಣ್ಣಗಾಗಿಸಲು ಸಿದ್ದರಾಮಯ್ಯ ಮುಂದಾಗಿದ್ದರು ಎನ್ನಲಾಗುತ್ತಿದೆ.