Advertisement

CM ರಾಜೀನಾಮೆ ನೀಡುವುದು ಸೂಕ್ತ: ಸಂಸದ ಕೋಟ ಶ್ರೀನಿವಾಸ ಪೂಜಾರಿ

01:08 AM Sep 27, 2024 | Team Udayavani |

ಉಡುಪಿ: ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರದ್ವಾಜ್‌ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ತನಿಖೆಗೆ ಅನುಮತಿ ನೀಡಿದಾಗ ಸಿದ್ದರಾಮಯ್ಯನವರು ಯಡಿಯೂರಪ್ಪನವರ ರಾಜೀನಾಮೆ ಕೇಳಿದ್ದರು. ಅದೇ ಮಾನದಂಡವನ್ನು ಅನುಸರಿಸಿ ಈಗ ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

Advertisement

ಗುರುವಾರ ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಮಾತಿಗೆ ಬದ್ಧರಾಗಿ ರಾಜೀನಾಮೆ ಕೊಡುವವರೆಗೆ ಬಿಜೆಪಿ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ. ಬೆಂಗಳೂರಿನಲ್ಲಿ ಗಾಂಧಿ ಪ್ರತಿಮೆ ಮುಂದೆ ಹೋರಾಟ ಆರಂಭವಾಗಿದ್ದು, ರಾಜ್ಯಾದ್ಯಂತ ಮುಂದುವರಿಯಲಿದೆ ಎಂದರು.

ತೀರ್ಪನ್ನು ಗೌರವಿಸಿ
ಹೈಕೋರ್ಟ್‌ ನೀಡಿದ ತೀರ್ಪನ್ನು ರಾಜಕೀಯ ಪ್ರೇರಿತ ಎಂದ ಸಚಿವ ಜಮೀರ್‌ ಅಹಮ್ಮದ್‌ ಹೇಳಿಕೆಗೆ ತಿರುಗೇಟು ನೀಡಿ, ನ್ಯಾಯಾಲಯದ ತೀರ್ಪನ್ನು ಮಂತ್ರಿಗಳು ತಲೆಬಾಗಿ ಸ್ವೀಕರಿಸಬೇಕು. ಒಪ್ಪಿಗೆ ಇಲ್ಲದಿದ್ದಲ್ಲಿ ಮೇಲ್ಮನವಿ ಸಲ್ಲಿಸಲಿ. ಅದನ್ನು ಬಿಟ್ಟು ಇಂತಹ ಹೇಳಿಕೆ ನೀಡುವ ಮಂತ್ರಿಗಳನ್ನು ಇಟ್ಟುಕೊಂಡು ಹೇಗೆ ಆಡಳಿತ ನಡೆಸುತ್ತೀರಿ ಎಂದು ಪ್ರಶ್ನಿಸಿದರು.

ರಾಜ್ಯ ಸರಕಾರದ ವೈಫ‌ಲ್ಯ
ರಾಜ್ಯದಲ್ಲಿ 12 ಲಕ್ಷ ಪಡಿತರ ಚೀಟಿಗಳನ್ನು ಸರಕಾರ ರದ್ದು ಮಾಡುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದೆ. ಇದರಿಂದ ರಾಜ್ಯದ 12 ಲಕ್ಷ ಕುಟುಂಬಗಳು ಗ್ಯಾರಂಟಿ ಯೋಜನೆಯಿಂದ ವಂಚಿತವಾಗುತ್ತವೆ. ಇದು ರಾಜ್ಯ ಸರಕಾರದ ವೈಫ‌ಲ್ಯ ಮತ್ತು ಜನರಿಗೆ ಮಾಡುತ್ತಿರುವ ವಂಚನೆ ಎಂದರು.

ತಿರುಪತಿ ವಿಷಯದಲ್ಲಿ
ಕಾಂಗ್ರೆಸ್‌ ಮೌನ
ತಿರುಪತಿ ಲಡ್ಡು ಪ್ರಸಾದ ಹಗರಣದಿಂದ ಹಿಂದೂ ಭಕ್ತರ ಭಾವನೆಗಳಿಗೆ ನೋವಾಗಿರುವ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕಠಿನ ಶಬ್ದಗಳಿಂದ ಖಂಡಿಸಿದ್ದಾರೆ. ಆದರೆ ಆಂಧ್ರ ಪ್ರದೇಶದಲ್ಲಿ ಹಿಂದಿನ ಸರಕಾರಗಳ ಅವಧಿಯಲ್ಲಿ ಅಧಿಕಾರ ಹಂಚಿಕೊಂಡಿದ್ದ ಕಾಂಗ್ರೆಸ್‌ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ ಎಂದರು.

Advertisement

ಒಂದೆರೆಡು ದಿನಗಳಲ್ಲಿ
ಅಭ್ಯರ್ಥಿ ಘೋಷಣೆ
ವಿಧಾನ ಪರಿಷತ್‌ಗೆ ಉಡುಪಿ, ದ.ಕ. ಸ್ಥಳಿಯಾಡಳಿತ ಸಂಸ್ಥೆಗಳ ಪ್ರತಿನಿಧಿ ಚುನಾವಣೆಗೆ ಅಭ್ಯರ್ಥಿ ಘೋಷಣೆ ಒಂದೆರಡು ದಿನಗಳಲ್ಲಿ ಆಗಲಿದೆ. ಈ ಸ್ಥಾನಕ್ಕೆ ಬಿಜೆಪಿಯಲ್ಲಿ ಸಾಕಷ್ಟು ಆಸಕ್ತರಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿಯವರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿ, ಪಕ್ಷದ ನಾಯಕರು ಹಾಗೂ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆದು ಅಂತಿಮಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಬಿಜೆಪಿ ಬಹುದೊಡ್ಡ ಅಂತರದಿಂದ ಗೆಲ್ಲಲಿದೆ ಎಂದು ಕೋಟ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next