ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‌ಗೆ ಸಾವಿರ ಕೋಟಿ ರೂ. ಗಳನ್ನು ರಾಜ್ಯದ ಹಲವಾರು ಸಚಿವರಿಂದ ಹಾಗೂ ಶಾಸಕರಿಂದ ಸಂಗ್ರಹಿಸಿ ಹೈಕಮಾಂಡ್‌ಗೆ ಹಂಚಿಕೆ ಮಾಡಿರುವ ವಿವರಗಳುಳ್ಳ ಡೈರಿಯನ್ನು ಸುದ್ದಿ ವಾಹಿನಿಯೊಂದು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಯುವ ಮೋರ್ಚಾ ಆಗ್ರಹಿಸಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಪರಶುರಾಮ ನಸಲವಾಯಿ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಸೇರಿದಂತೆ ಹಲವಾರು ಸಮಸ್ಯೆಗಳಿರುವ ಸಂದರ್ಭದಲ್ಲಿ ರಾಜ್ಯದ ಬಡ ಜನರಿಗೆ ಸಲ್ಲಬೇಕಾದ ಸಂಪತ್ತನ್ನು ಕೊಳ್ಳೆ ಹೊಡೆದು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್‌ಗೆ ಸಾವಿರ ಕೋಟಿ ರೂ.ಗಳನ್ನು ಕಪ್ಪ ನೀಡಿದ್ದ ವಿವರಗಳು ಬಯಲಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಎಲ್‌ಸಿ ಕೆ.ಗೋವಿಂದರಾಜು ಮೂಲಕ ಹಣ ಸಂಗ್ರಹಿಸಿದ್ದು ಮತ್ತು ಸಂದಾಯ ಮಾಡಿರುವುದು ಡೈರಿಯಲ್ಲಿ ಇನಿಷಿಯಲ್‌ಗಳ ರೂಪದಲ್ಲಿ ಸ್ವಬರಹದಲ್ಲಿದ್ದರೂ ನಗ್ನ ಸತ್ಯವನ್ನು ಒಪ್ಪಿಕೊಳ್ಳದೇ ಅಂಗೈಯಲ್ಲಿರುವ ಹುಣ್ಣನ್ನು ನೋಡಲು ಕನ್ನಡಿ ಹುಡುಕಿದಂತೆ ನಟಿಸುತ್ತಿರುವ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಕರ್ನಾಟಕದ ಜನತೆ ನಂಬಿಸಿ ಅಧಿಕಾರಕ್ಕೆ ಏರಿದ ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕತೆಯಿದ್ದರೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಆಪ್ತ ಕೆ.ಗೋವಿಂದರಾಜು ಅವರನ್ನು ಮಂಪರು ಪರೀಕ್ಷೆಗೆ ಒಪ್ಪಿಸಬೇಕು. ಮಂತ್ರಿಮಂಡಲದೊಂದಿಗೆ ಸಾಮೂಹಿಕ ರಾಜೀನಾಮೆ ನೀಡಿ ಚುನಾವಣೆಗೆ ಬರಬೇಕು ಎಂದರು.
ಪ್ರತಿಭಟನೆ ಉದ್ದೇಶಿಸಿ ದಕ್ಷಿಣ ಮಂಡಲ ಅಧ್ಯಕ್ಷ ಶ್ರೀನಿವಾಸ ದೇಸಾಯಿ ಮಾತನಾಡಿ, ರಾಜ್ಯದ ಜನತೆಯ ತೆರಿಗೆ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ನೀಡಿ ಜನತೆಗೆ ಮೋಸ ಮಾಡಿರುವ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಾನಗರ ಜಿಲ್ಲಾಧ್ಯಕ್ಷ ಮಲ್ಲು ಉದನೂರ, ಸಂತೋಷ ಹಾದಿಮನಿ, ಶರಣು ಸಜ್ಜನ್, ಕೈಲಾಸ ಪಾಟೀಲ, ಪ್ರವೀಣನಾಯಕ, ಸುನೀಲ್, ಬಸವರಾಜ ಜವಳಿ, ನಾಗರಾಜ ಉಪಾಸೆ, ಮಹಿಂದ್ರಾ ನಾಯ್ಡು, ಶ್ರೀಧರ ಚವ್ಹಾಣ, ಸುನೀಲ ಮಹಾಗಾಂವಕರ, ಅಮೀತ ಚಿಡಗುಂಪಿ, ಶಿವು ಕಾಳಗಿ, ಸಂದೇಶ, ಮಲ್ಲಿಕಾರ್ಜುನ ಕೊಂಡೇದ, ದಿಗಂಬರ್ ಮಾಗೆನಗೇರಿ, ಶಾಂತಿನಾಥ, ಸ್ವರೂಪ, ಶಶಾಂಕ, ಶರಣು ಹಿರೇಗೌಡ, ದತ್ತಾತ್ರೇಯ, ರಾಜು ಮಾಳಗಿ, ಶಿವು, ಪ್ರಶಾಂತ ಜಾಧವ, ಅನಿಲ, ಪ್ರಮೋದ, ಪ್ರವೀಣ ಯಾದವ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.