ಬೆಂಗಳೂರು:‘ಕೆಲವರು ಚಂದ್ರಲೋಕಕ್ಕೆ ಹೋಗುತ್ತಾರೆ ಅನ್ನುತ್ತಾರೆ,ಹಾಗಂತ ನಾನು ಚಂದ್ರಲೋಕಕ್ಕೆ ಹೋಗಕ್ಕೆ ಆಗುತ್ತೇನ್ರಿ…’ ಇದು ‘ಮುಂದಿನ ಕಾಂಗ್ರೆಸ್‌ನ ಪ್ರಧಾನಮಂತ್ರಿ ಅಭ್ಯರ್ಥಿ ನೀವಂತೆ’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಖಡಕ್ ಉತ್ತರ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ‘ನಾನು ಗುಜರಾತ್‌ಗೆ ಪ್ರಚಾರಕ್ಕೆ ತೆರಳುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಸಾಕಷ್ಟು ರಾಷ್ಟ್ರೀಯ ನಾಯಕರಿದ್ದಾರೆ.ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರಚಾರಕ್ಕೆ ಹೋಗಬಹುದು’ ಎಂದರು.
‘ಡಿಸೆಂಬರ್ 13 ರಿಂದ ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ಪಕ್ಷದ ವತಿಯಿಂದಲೂ ಪ್ರಚಾರ ನಡೆಸುತ್ತೇವೆ. ಸರ್ಕಾರದ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷರು ಬರುವಂತಿಲ್ಲ, ಅವರು ಕರೆದಾಗ ನಾನು ಹೋಗುತ್ತೇನೆ’ ಎಂದರು.
‘ಮಾರ್ಚ್‌ನಲ್ಲಿ ನಾನು ಮತ್ತು ಪಕ್ಷದ ಅಧ್ಯಕ್ಷರು ಜಂಟಿಯಾಗಿ ಪ್ರಚಾರ ಮಾಡುತ್ತೇವೆ ಆದರೆ ಬಿಜೆಪಿಯವರಂತೆ ತಮಟೆ ಬಾರಿಸಿಕೊಂಡು ಹೋಗುವುದಿಲ್ಲ’ ಎಂದರು.
ಯೋಗೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸಿಎಂ ‘ಬಿಜೆಪಿಯವರು ಸಾಕೇತಿಕ ಪ್ರತಿಭಟನೆ ಮಾಡಲಿ , ಬೇಕಾದರೆ ಸಾಂಕ್ರಾಮಿಕ ಪ್ರತಿಭಟನೆಯನ್ನಾದರೂ ಮಾಡಲಿ . ಸಚಿವ ವಿನಯ್ ಕುಲಕರ್ಣಿ ಅವರ ಹೆಸರಿಗೆ ಮಸಿ ಬಳಿಯಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ’ಎಂದರು.
‘ಯಡಿಯೂರಪ್ಪ ಮೇಲೆ 20 ಕೇಸ್‌ಗಳಿವೆ,ಯೋಗಿ ಆದಿತ್ಯನಾಥ್,ಅನಂತ್ ಕುಮಾರ್ ಹೆಗಡೆ, ಜಿಗಜಿಣಗಿ ಅವರ ಮೇಲೆ ಕೇಸ್‌ಗಳಿವೆ, ಅವರು ಮೊದಲು ರಾಜೀನಾಮೆ ನೀಡಲಿ’ ಎಂದರು.
ಬಿಜೆಪಿ ಸೇರ್ಪಡೆಯಾಗಿರುವ ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿ ಕಾರಿದರು.