ಬೆಂಗಳೂರು : ಬೌದ್ಧ ಧರ್ಮಗುರು ದಲೈಲಾಮ ಅವರ ಹತ್ಯೆಗೆ ಸಂಚೂ ರೂಪಿಸಿದ್ದ ಭಯೋತ್ಪಕರನ್ನು ಸಮರ್ಥಿಸಿಕೊಳ್ಳಲು ರಾಜ್ಯದ ಮುಖ್ಯಮಂತ್ರಿ ಸುಪಾರಿ ಪಡೆದಿದ್ದಾರೆ ಎಂದು ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ ಆರೋಪಿಸಿದರು.
ದಲೈಲಾಮ ಅವರ ಹತ್ಯೆಗೆ ಸಂಚೂ ರೂಪಿಸಿರುವ ಆರೋಪದಡಿ ರಾಷ್ಟ್ರೀಯ ತನಿಖಾ ತಂಡ ಇಬ್ಬರನ್ನು ಈಗಾಗಲೇ ಬಂಧಿಸಿದೆ. ಯಾವುದೇ ತನಿಖೆ ನಡೆಯುವ ಮೊದಲೇ ಮುಖ್ಯಮಂತ್ರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಅಮಾಯಕರ ಬಂಧನ ಮಾಡಿರಬಹುದು ಎಂದು ಹೇಳುವ ಮೂಲಕ ಭಯೋತ್ಪಾದಕರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಬುಧವಾರ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇತ್ತೀಚೆಗೆ ತುಮಕೂರಿನಲ್ಲಿ ಮಾಜಿ ಮೇಯರ್ ಅನ್ನು ಹಾಡಹಗಲೇ ಕೊಲೆ ಮಾಡಿದ್ದಾರೆ. ತಮ್ಮದೇ ಪಕ್ಷದ ಸದಸ್ಯನ ಕೊಲೆಯಾದರೂ, ಮುಖ್ಯಮಂತ್ರಿಗಳು ಏನೂ ಪ್ರತಿಕ್ರಿಯೆ ನೀಡಿಲ್ಲ. ಉಪ ಮುಖ್ಯಮಂತ್ರಿಗಳು ಶೂನ್ಯ ಸಂಚಾರ ಬಯಸುತ್ತಿದ್ದಾರೆ ಹೊರತು, ರಾಜ್ಯದ ಕಾನೂನು ಸುವ್ಯವಸ್ಥೆ ಸರಿಪಡಿಸುವ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಎಂದು ದೂರಿದರು.
ಮಾಜಿ ಸಚಿವರ ಬೆಂಬಲಿಗರು ಹಾಗೂ ಜಿಪಂ ಪಂಚಾಯತ್ ಸದಸ್ಯರು ಸಮೇತವಾಗಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ನುಗ್ಗಿ ಕುಲಪತಿಗಳನ್ನೇ ಎಳೆದಾಡಿದ್ದಾರೆ. ಅಲ್ಲಿನ ಪೀಠೊಪಕರಣಗಳನ್ನು ನಾಶ ಮಾಡಿದ್ದಾರೆ. ಅಷ್ಟಾದರೂ ಯಾರ ಮೇಲೂ ಕ್ರಮ ತೆಗೆದುಕೊಂಡಿಲ್ಲ. ಪೊಲೀಸ್ ಇಲಾಖೆ ಸ್ವಯಂ ಕೇಸು ದಾಖಲಿಸಿಕೊಂಡು ಗೂಂಡಾಗಿರಿ ನಡೆಸಿದವರ ವಿರುದ್ಧ ಕಠಣಿ ಕ್ರಮ ತೆಗೆದುಕೊಳ್ಳಬೇಕು. ಭಯೋತ್ಪಾದಕರ ಬಂಧನ ಸಂಬಂಧ ಸಿಎಂ ಹೇಳಿರುವ ಪ್ರತಿಕ್ರಿಯೆಗೂ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
ಕೊಡಗಿನಲ್ಲಿ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತನ ಕೊಲೆ ಮಾಡಿದ್ದಾರೆ. ರಾಜ್ಯದಲ್ಲಿ ಸರಣಿ ಹತ್ಯೆ ಪುನರ್ ಆರಂಭವಾಗಿದೆ. ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದುಹೋಗಿದೆ. ರಾಮನಗರ ಉಪಚುನಾವಣೆ ಗೆಲ್ಲುವುದಕ್ಕಾಗಿ ಅಲ್ಪಸಂಖ್ಯಾತರ ಓಲೈಕೆಗೆ ಮುಖ್ಯಮಂತ್ರಿಗಳು ಭಯೋತ್ಪಾದಕರ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ ಸಿಎಂ ಮತ್ತು ಉಪಮುಖ್ಯಮಂತ್ರಿ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.
ಸಹ ವಕ್ತಾರ ಎಸ್.ಪ್ರಕಾಶ್ ಮಾತನಾಡಿ, ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಗೆ ಬಂದಿರುವ ಮೊಹಮ್ಮದ್ ನಲಪಾಡ್‌ನನ್ನು ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಿದ್ದರೂ, ಕಾಂಗ್ರೆಸ್ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾನೆ. ಬೆಂಗಳೂರು ನಗರ ಹಾಳು ಮಾಡಲು ಕಾಂಗ್ರೆಸ್ ಪಕ್ಷವೇ ನಲಪಾಡ್‌ಗೆ ಉತ್ತೇಜನ ನೀಡುತ್ತಿರಬೇಕು. ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ನಡೆಯುತ್ತಲೇ ಇದೆ. ಇತ್ತೀಚೆಗೆ ಯಡಿಯೂರಪ್ಪ ಅವರ ಮನೆಗೂ ಮುತ್ತಿಗೆ ಹಾಕಿದ್ದರು. ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ನಲಪಾಡ್ ಸಂಸ್ಕೃತಿಗೆ ಕಾಂಗ್ರೆಸ್ ಸಮ್ಮತಿಯ ಮುದ್ರೆ ಒತ್ತಿರಬೇಕು ಎಂದು ಲೇವಡಿ ಮಾಡಿದರು.