ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ಪುನಾರಂಭಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಆ.26ರಂದು ಬೆಂಗಳೂರಿನಲ್ಲಿ ಸಿಎಂ ಅವರನ್ನು ಭೇಟಿಯಾಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಆರಂಭ ಹಾಗೂ ರೈತರ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಆಶ್ವಾಸನೆ ಸಿಕ್ಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಂತ್ರಿಕ ತಂಡ ಪರಿಶೀಲನೆ: ಮೈಷುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಗಳಿಗೆ ತಾಂತ್ರಿಕ ತಂಡವನ್ನು ಕಳುಹಿಸಿ ಅಧ್ಯಯನ ಮಾಡಿಸಲಾಗುವುದು. ಅವ ರಿಂದ ವರದಿ ಪಡೆದ ಬಳಿಕವಷ್ಟೇ ಆರಂಭಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಪ್ರಮುಖವಾಗಿ ಈ ಕಾರ್ಖಾನೆ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಸಾಗಣೆ ಮಾಡುವ ಸಂಬಂಧ ಕ್ರಮ ವಹಿಸುವಂತೆ ಸಭೆಯಲ್ಲಿ ಹಾಜರಿದ್ದ ಡೀಸಿಗೆ ಸೂಚನೆ ನೀಡಿದರು ಎಂದು ವಿವರಿಸಿದರು.
25 ಕೋಟಿ ರೂ. ಅವಶ್ಯ: ಪಿಎಸ್‌ಎಸ್ ಕಾರ್ಖಾನೆ ಪ್ರಾರಂಭಿಸಬೇಕಾದರೆ ಕನಿಷ್ಟ 25 ಕೋಟಿ ರೂ ಅವಶ್ಯಕತೆ ಇದೆ. ಇದರಲ್ಲಿ 10 ಕೋಟಿ ರೂ. ಸಾಲ ಮತ್ತು ನೌಕರರ ವೇತನ ಪಾವತಿಸಿ, 10 ಕೋಟಿ ರೂ.ಗಳನ್ನು ರೈತರಿಗೆ ನೀಡಬೇಕಿದೆ. ಉಳಿದ 5 ಕೋಟಿ ರೂ. ಹಣದಲ್ಲಿ ಯಂತ್ರಗಳ ದುರಸ್ತಿ ಪಡಿಸಬಹುದು. ಇನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿ ಕಾರ್ಖಾನೆ ನಿರ್ವಹಣೆ ಮಾಡಿಸಲು ನಮ್ಮದೇನು ಅಭ್ಯಂತರವಿಲ್ಲ. ಆದರೆ, ಕೋ ಆಪರೇಟಿವ್‌ನಲ್ಲಿಯೇ ನಿರ್ವಹಣೆ ಮಾಡಬೇಕೆಂಬುದು ನಮ್ಮ ಆದ್ಯತೆ ಆಗಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಸಾಗಣೆ ವೆಚ್ಚ ಭರಿಸಲಿ: ಮುಖ್ಯಮಂತ್ರಿ ಸೂಚನೆ ಬಳಿಕ ಮೈಷುಗರ್, ಪಿಎಸ್‌ಎಸ್ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಬೇರೆ ಕಾರ್ಖಾನೆಗೆ ಸಾಗಣೆ ಮಾಡಲು ಕ್ರಮ ವಹಿಸಲಾಗಿದೆ. ಆದರೆ, ಸಾಗಣೆ ವೆಚ್ಚದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಹಿಂದೆ ಸಾಗಣೆ ಮಾಡಿರುವ ವೆಚ್ಚವನ್ನೇ ಇನ್ನೂ ನೀಡಿಲ್ಲ. ಆದ್ದರಿಂದ, ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂಬುದೇ ನಮ್ಮ ಒತ್ತಾಯ ಎಂದು ದರ್ಶನ್ ಆಗ್ರಹಿಸಿದರು.
ಜಿಲ್ಲೆಯ ರೈತರು ಚಿನ್ನಾಭರಣವನ್ನು ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಅಡವಿಟ್ಟು ಹೆಚ್ಚುವರಿ ಬಡ್ಡಿಗೆ ಸಾಲ ಪಡೆದುಕೊಳ್ಳುತ್ತಿದ್ದಾರೆ. ಕೊನೆಗೆ ಬಡ್ಡಿ ಕಟ್ಟಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ, ಖಾಸಗಿ ಫೈನಾನ್ಸ್ ಬಿಟ್ಟು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಕೆಂಪೂಗೌಡ, ಗೋವಿಂದೇಗೌಡ, ರಾಮಕೃಷ್ಣಯ್ಯ, ರಾಮಲಿಂಗು, ಲತಾ ಶಂಕರ್ ಮತ್ತಿತರರಿದ್ದರು.