ಮಂಡ್ಯ: ಮುಂಬೈ ವಲಸಿಗರಿಂದ ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ನಾಗಮಂಗಲದಲ್ಲಿ ಕೊರೊನಾ ಸೋಂಕು ವಿಷಮ ಸ್ಥಿತಿ ತಲುಪುತ್ತಿರುವ ಹಿನ್ನೆಲೆಯಲ್ಲಿ ವಲಸಿಗರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಕೊರೊನಾ ಸಂಬಂಧ ಸಿಎಂ ಯಡಿಯೂರಪ್ಪ ಮಂಡ್ಯ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿ, ಮುಂದಿನ ಆದೇಶದವರೆಗೆ ಮುಂಬೈನಿಂದ ಕರ್ನಾಟಕಕ್ಕೆ ಬರಬಾರದೆಂದು ಆದೇಶಿಸಿರುವುದಾಗಿ ತಿಳಿಸಿದರು.
ವಲಸಿಗರಿಂದಲೇ ಅಧಿಕ: ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳ ಕುರಿತು ಮುಖ್ಯಮಂತ್ರಿಗಳಿಗೆ ವಿವರಿಸಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಪ್ರಸ್ತುತ ಮುಂಬೈನಿಂದ ವಲಸಿಗರಿಂದಲೇ ಸೋಂಕು ಹೆಚ್ಚಳವಾಗಿದೆ. ಒಟ್ಟು ಪ್ರಕರಣಗಳಲ್ಲಿ 190ಕ್ಕೂ ಹೆಚ್ಚು ಪ್ರಕರಣಗಳು ಮುಂಬೈನಿಂದಲೇ ಬಂದಿವೆ ಎಂದು ತಿಳಿಸಿದರು.
ಸಿಎಂಗೆ ಮಾಹಿತಿ: ಕೋವಿಡ್-19 ಪರೀಕ್ಷೆಗೆ ಮಾಡಿಕೊಂಡಿರುವ ಲ್ಯಾಬ್ ವ್ಯವಸ್ಥೆ, ಸೋಂಕಿತರಿಗೆ ಚಿಕಿತ್ಸೆ ನೀಡಲು ಲಭ್ಯವಿರುವ ಬೆಡ್ ಗಳ ವ್ಯವಸ್ಥೆ, ಕೋವಿಡ್ ಸೆಂಟರ್, ಕೋವಿಡ್ ಕಮ್ಯೂನಿಟಿ ಹೆಲ್ತ್ ಸೆಂಟರ್ ಹಾಗೂ ಕ್ವಾರಂಟೈನ್ ಸೆಂಟರ್‌ಗಳ ಕುರಿತು ಮಾಹಿತಿ ನೀಡಿ ದರು. ಮುಂಬೈ ವಲಸಿಗರ ನಿರ್ಬಂಧಕ್ಕೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದ ಜಿಲ್ಲಾಧಿ ಕಾರಿಗಳು, ಇದರಿಂದ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಅನುಕೂಲವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡುವ ಸಲುವಾಗಿ ಪ್ರತಿ ಗ್ರಾಮಕ್ಕೂ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರ ಜೊತೆ ಆಶಾ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ, ಉಸಿರಾಟದ ತೊಂದರೆ ಸೇರಿದಂತೆ ಇನ್ನಿತರೆ ರೋಗಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆಶಾಕಾರ್ಯ ಕರ್ತರಿಗೆ ಮಾಹಿತಿ ನೀಡುವಂತೆ ತಿಳಿಸಿರುವುದಾಗಿ ಹೇಳಿದರು.
ವಲಸಿಗರು ಸಹಕರಿಸಿ-ಜಿಲ್ಲಾಧಿಕಾರಿ: ರಾಜ್ಯದಲ್ಲಿ ಕೊರೊನಾ ಎರಡನೇ ಹಂತದಲ್ಲಿದೆ. ಸಮುದಾಯಕ್ಕೆ ಹರಡುವುದನ್ನು ತಡೆಯಲಾಗಿದೆ. ಸಮಾಜಕ್ಕೆ ಹರಡದಂತೆ ಎಚ್ಚರ ವಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಕ್ವಾರಂಟೈನ್‌ನಲ್ಲಿರುವಂತಹ ಸೌಲಭ್ಯಗಳಿಗೆ ವಲಸಿಗರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮನವಿ ಮಾಡಿದರು. ಪೌಷ್ಟಿಕ ಆಹಾರ, ಕುಡಿಯುವ ನೀರು, ಬಟ್ಟೆ, ಹಾಸಿಗೆಗಳೆಲ್ಲವನ್ನೂ ಕೊಡುತ್ತಿದ್ದೇವೆ.
ಆದರೂ ಅಲ್ಲಿನ ಸಿಬ್ಬಂದಿಗೆ ಕಿರುಕುಳ ಕೊಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ವಿಡಿಯೋ ಮಾಡಿ ಕಿರುಕುಳ ನೀಡಿ ವ್ಯಾಟ್ಸಾಪ್, ಟಿಕ್‌ಟಾಕ್ ಮಾಡಿ ಕಳುಹಿಸುತ್ತಿದ್ದಾರೆ. ಅಧಿಕಾರಿಗಳು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು, ಕ್ವಾರಂಟೈನ್‌ಗೆ ಬರುವಂತವವರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.