ಮೈಸೂರು: ಉತ್ತರ ಕರ್ನಾಟಕ ಭಾಗದ ಮುಖಂಡರ ಒತ್ತಡ ಹಾಗೂ ಹೈಕಮಾಂಡ್ ನಿರ್ದೇಶನದಂತೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಏ.24ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಾಮುಂಡೇಶ್ವರಿ ಹಾಗೂ ಬಾದಾಮಿ,ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು.
ಬಾದಾಮಿ ಕ್ಷೇತ್ರದಿಂದ ಬಿಜೆಪಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸಲು ಮುಂದಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.
ಸೋಲಿನ ಭೀತಿಯಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸೋಲಿನ ಭಯದಿಂದಲೇ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಕ್ಷೇತ್ರದಲ್ಲಿ ನಿಲ್ಲುತ್ತಿದ್ದಾರಾ? ಈ ಹಿಂದೆ ಮೋದಿ ಸಹ ಸೋಲಿನ ಭಯದಿಂದಲೇ ಎರಡು ಕಡೆ ಸ್ಪರ್ಧಿಸಿದ್ದರೆ ಎಂದು ಪ್ರಶ್ನಿಸಿದರು.
“ಬಾದಾಮಿಯಲ್ಲಿನ ಸ್ಪರ್ಧೆಯಿಂದ ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನ ಪರ ಮತ ಹಾಕಲು ತೀರ್ಮಾನಿಸಿದ್ದು, ಕುಮಾರಸ್ವಾಮಿ ಒಂದಲ್ಲ, ಎಲ್ಲಾ ದಿನ ಇಲ್ಲೇ ಪ್ರಚಾರ ಮಾಡಿದರೂ ನಾನು ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ನಮ್ಮಪ್ಪನ ಮಗ: ಕೆಲವರು ಹಸಿರು ಶಾಲು ಹೊದ್ದುಕೊಂಡು ನಾನು ರೈತರ ಮಗ ಅನ್ನುತ್ತಾರೆ. ಇನ್ನು ಕೆಲವರು ಮಣ್ಣಿನ ಮಗ ಅನ್ನುತ್ತಾರೆ. ಆದರೆ, ನಾನು ನಮ್ಮಪ್ಪನ ಮಗ ಎಂದು ದೇವೇಗೌಡ, ಯಡಿಯೂರಪ್ಪಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ದೇವೇಗೌಡರು ಹೊಲ ಉತ್ತಿದ್ದಾರೆ. ನಾನೂ ಜಾಸ್ತಿ ಹೊಲ ಉತ್ತಿದ್ದೇನೆ. ಕುಮಾರಸ್ವಾಮಿಗೆ ಹೊಲ ಉತ್ತು ಗೊತ್ತಿಲ್ಲ. ಈಗ ಇಸ್ರೇಲ್ ಮಾದರಿ ಕೃಷಿ ಅನ್ನುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಮಾಡದಿದ್ದವರು ಮುಂದೆ ಮಾಡುತ್ತೇನೆ ಎಂದರೆ ಜನ ನಂಬುತ್ತಾರಾ ಎಂದು ಪ್ರಶ್ನಿಸಿದರು.