Advertisement

Congress ಕೋಲಾರದಲ್ಲಿ ಆ ಮುನಿಯಪ್ಪ ಬದಲು ಈ ಮುನಿಯಪ್ಪ ಕೈ ಸ್ಪರ್ಧಿ?

12:11 AM Mar 27, 2024 | Team Udayavani |

ಬೆಂಗಳೂರು: ಬಣ ರಾಜಕಾರಣದಿಂದ ತೀವ್ರ ಚರ್ಚೆಗೊಳಗಾಗಿರುವ ಕೋಲಾರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಸಚಿವ ಕೆ.ಎಚ್‌. ಮುನಿಯಪ್ಪ ಬದಲು ಸಿ.ಎಂ. ಮುನಿಯಪ್ಪ ಹೆಸರು ಮುಂಚೂಣಿಗೆ ಬಂದಿದೆ.

Advertisement

ತಮ್ಮ ಅಳಿಯನಿಗೆ ಟಿಕೆಟ್‌ ಕೊಡಬೇಕೆಂದು ಪಟ್ಟು ಹಿಡಿದಿರುವ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಒತ್ತಡ ಹೇರುವ ಕೆಲಸ ಮುಂದುವರಿಸಿದ್ದಾರೆ. ಇಷ್ಟಾದರೂ ಟಿಕೆಟ್‌ ಯಾರಿಗೆ ಎಂಬುದು ಇನ್ನೂ ನಿಗೂಢವಾಗಿದೆ. ಈ ಮಧ್ಯೆ ಕೋಲಾರದ ಬಣ ರಾಜಕಾರಣದಿಂದ ಬೇಸತ್ತಿರುವ ಹೈಕಮಾಂಡ್‌ ತಟಸ್ಥ ಅಭ್ಯರ್ಥಿಗಾಗಿ ಶೋಧ ನಡೆಸಿದೆ.

ಸಚಿವ ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಬಣದ ನಡುವೆ ಒಮ್ಮತ ಮೂಡದ ಕಾರಣ ಹೋರಾಟಗಾರ ಸಿ.ಎಂ. ಮುನಿಯಪ್ಪ ಅವರ ಹೆಸರು ಮುಂಚೂಣಿಗೆ ಬಂದಿದೆ.

ಮುನಿಯಪ್ಪ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್‌ ಕೊಡಬೇಕೆಂದು ಪಟ್ಟು ಹಿಡಿದಿದ್ದರೆ ರಮೇಶ್‌ ಕುಮಾರ್‌ ಬಣ ರಾಜ್ಯಸಭೆಯ ಮಾಜಿ ಸದಸ್ಯ ಡಾ| ಎಲ್‌. ಹನುಮಂತಯ್ಯ ಪರ ಲಾಬಿ ನಡೆಸುತ್ತಿದೆ. ದಿಲ್ಲಿ ಹಾಗೂ ಬೆಂಗಳೂರಿನಲ್ಲಿ ಒಮ್ಮತ ಮೂಡಿಸಲು ಸರಣಿ ಸಭೆಗಳು ನಡೆದರೂ, ಯಾವುದೇ ಬಣ ಪಟ್ಟು ಬಿಡದ ಕಾರಣ ಈಗ ಹೈಕಮಾಂಡ್‌ ಹೊಸ ಅಭ್ಯರ್ಥಿ ಶೋಧದಲ್ಲಿ ನಿರತವಾಗಿದೆ.

ಇಂದು ಸಿಇಸಿ ಸಭೆ?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿಯೇ ಉಳಿದುಕೊಂಡ ಪರಿಣಾಮ ದಿಲ್ಲಿಯಲ್ಲಿ ಮಂಗಳವಾರ ನಿಗದಿಯಾಗಿದ್ದ ಕೇಂದ್ರ ಚುನಾವಣ ಸಮಿತಿ ಸಭೆ ಬುಧವಾರಕ್ಕೆ ಮುಂದೂಡಲ್ಪಟ್ಟಿದೆ. ಹೀಗಾಗಿ ರಾಜ್ಯದ 4 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ವಿಳಂಬವಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿಸಿಕೊಂಡಿದ್ದು ಮಂಗಳವಾರ ಸಭೆ ನಡೆಯುವ ನಿರೀಕ್ಷೆ ಇತ್ತು. ಆದರೆ ಖರ್ಗೆ ಅವರು ಬೆಂಗಳೂರಿನಲ್ಲಿಯೇ ಉಳಿದ ಕಾರಣ ಸಭೆ ನಡೆದಿಲ್ಲ. ಬುಧವಾರ ಸಭೆ ನಡೆಯುವ ಸಾಧ್ಯತೆಗಳಿದ್ದು ಬಾಕಿ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಟಿಕೆಟ್‌ ಆಕಾಂಕ್ಷಿಗಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next