Advertisement
ರಾಜ್ಯದ ಶೇ. 60 ಭೂಮಿಯನ್ನು ನೀರಾವರಿಗೊಳಪಡಿಸುವ ಬೃಹತ್ ಕೃ. ಮೇ.ಯೋ. ಕೇಂದ್ರ ಸ್ಥಾನ ಆಲಮಟ್ಟಿಯಲ್ಲಿ ಕೃಷ್ಣೆಗೆ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ತುಂಬಿ ನಿಂತಿದೆ. ಶಾಸ್ತ್ರಿ ಜಲಾಶಯಕ್ಕೆ ಮಹಾಪೂರ ಬಂದು ತಿಂಗಳುಗಳವರೆಗೆ ಸುಮಾರು 425 ಟಿಎಂಸಿ ಅಡಿ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿದೆ. ಬರದ ನಾಡಿನ ದಾಹ ನೀಗಿಸಲು ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಪ್ರಧಾನಿಯಾಗಿದ್ದ ಶಾಸ್ತ್ರೀಜಿಯವರು 1964 ಮೇ 22ರಂದು ಭೂಮಿಪೂಜೆ ನೆರವೇರಿಸಿದ್ದರು. ನಂತರ ಕಟ್ಟಡದ ಕಾಮಗಾರಿ ಹಾಗೂ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಯೋಜನೆಗಳು ಆಮೆಗತಿಯಲ್ಲಿ ಸಾಗಿದ್ದವು. ಇದರಿಂದ ಜಲಾಶಯದ ಕಟ್ಟಡ ನಿರ್ಮಾಣ ಕಾಮಗಾರಿ 2000ನೇ ಸಾಲಿನಲ್ಲಿ ಪೂರ್ಣಗೊಂಡಿದ್ದರೂ 2002ರಿಂದ ನೀರುಸಂಗ್ರಹಿಸಲು ಆರಂಭಿಸಲಾಯಿತು.
Related Articles
Advertisement
522 ಮೀ.ಗೆ ಎತ್ತರಿಸಿ: ಆಲಮಟ್ಟಿ ಶಾಸ್ತ್ರಿ ಜಲಾಶಯವನ್ನು 519.60 ಮೀ.ದಿಂದ 524.256 ಮೀ.ಗೆ ಎತ್ತರಿಸುವುದರಿಂದ ಭೂ ಸ್ವಾ ಧೀನ ಹಾಗೂ ಮುಳುಗಡೆ ಪುನರ್ವಸತಿ ಮತ್ತ ಪುನರ್ ನಿರ್ಮಾಣ ಸೇರಿದಂತೆ ಸುಮಾರು 1 ಲಕ್ಷ ಕೋಟಿ. ರೂ. ಬೇಕಾಗುತ್ತವೆ. ಇದರಿಂದ ಸಮಯವೂ ಗತಿಸಲಿದೆ, ಅಲ್ಲದೇ ಮಾರುಕಟ್ಟೆ ದರವೂ ಏರಿಕೆಯಾಗುತ್ತದೆ. 2013ರ ಭೂ ಸ್ವಾಧೀನ ಕಾಯ್ದೆಯನ್ವಯ ಸಂತ್ರಸ್ತರಿಗೆ ಪರಿಹಾರ ನೀಡಲೂ ನಿರ್ಮಾಣದ ವೆಚ್ಚ ಏರಿಕೆಯಾಗಲಿದೆ.
ಜಲಾಶಯವನ್ನು 524ರ ಬದಲಾಗಿ 522 ಮೀ.ಗೆ ಎತ್ತರಿಸುವುದರಿಂದ ಜಲಾಶಯದಲ್ಲಿ 60 ಟಿಎಂಸಿ ಅಡಿವರೆಗೂ ನೀರು ಸಂಗ್ರಹವಾಗಲಿದ್ದು, ಇದರಿಂದ ಸುಮಾರು 3.2 ಲಕ್ಷ ರೂ. ಹೆಕ್ಟೇರ್ ಪ್ರದೇಶ ನೀರಾವರಿಗೊಳಪಡಲಿದೆ. ಇದರಿಂದ 22 ಗ್ರಾಮಗಳನ್ನು 76 ಸಾವಿರ ಎಕರೆ ಭೂಮಿಯನ್ನು ಉಳಿಸಿಕೊಳ್ಳುವುದರೊಂದಿಗೆ ಹೆಚ್ಚಿನ ಆರ್ಥಿಕ ಹೊರೆಯಾಗದೆ ಕಾಲಮಿತಿಯಲ್ಲಿ ನೀರು ಬಳಸಿಕೊಳ್ಳಬಹುದಾಗಿದೆ.
ಚಾಲ್ತಿಯಲ್ಲಿರುವ ನ್ಯಾ| ಆರ್.ಎಸ್. ಬಚಾವತ್ ಹಾಗೂ ನ್ಯಾ| ಬೃಜೇಶಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧಿಕರಣಗಳು ನೀಡಿರುವ ತೀರ್ಪುಗಳು 2050 ಮೇ 31ಕ್ಕೆ ಮುಕ್ತಾಯಗೊಳ್ಳಲಿವೆ. ಮುಂದೆ ಹೊಸ ನ್ಯಾಯಾ ಧಿಕರಣಗಳಾಗಲಿ ಇಲ್ಲವೇ ಈಗಿರುವ ನಿಯಮಗಳನ್ನು ಮುಂದುವರಿಸಬಹುದಾಗಿದೆ. ಹೀಗಿರುವಾಗರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು 29 ವರ್ಷಗಳು ಬಾಕಿಯುಳಿದಿವೆ. ಅಷ್ಟರೊಳಗಾಗಿ ಬರದ ನಾಡಿನ ಹಣೆಪಟ್ಟಿ ಅಂಟಿಸಿಕೊಂಡಿರುವ ಜಿಲ್ಲೆಗಳನ್ನು ಸಮಗ್ರವಾಗಿ ನೀರಾವರಿಗೊಳಪಡಿಸಲು ಮುಖ್ಯಮಂತ್ರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕು. *ಶಂಕರ ಜಲ್ಲಿ