Advertisement

ಆ್ಯಂಬುಲೆನ್ಸ್‌ಗೆ ದಾರಿ ಬಿಟ್ಟ ಸಿಎಂ

12:41 PM May 22, 2017 | Team Udayavani |

ಬೆಂಗಳೂರು: ಜೀವನ್ಮರಣ ಹೋರಾಟದಲ್ಲಿದ್ದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ಗೆ ಮುಖ್ಯಮಂತ್ರಿಗಳ ಎಸ್ಕಾರ್ಟ್‌ ಅನ್ನು ಓವರ್‌ ಟೇಕ್‌ ಮಾಡಲು ಅವಕಾಶ ಮಾಡಿಕೊಟ್ಟ ನಗರ ಟ್ರಾಫಿಕ್‌ ಪೊಲೀಸರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಸಿಎಂ ಸಿದ್ದರಾಮಯ್ಯ ಅವರು ಹಾಸನದಿಂದ ಭಾನುವಾರ ಸಂಜೆ 4-30ರ ಸುಮಾರಿಗೆ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಬಳಿಕ ಹಳೇ ವಿಮಾನನಿಲ್ದಾಣ ರಸ್ತೆ ಮಾರ್ಗದ ಮೂಲಕ ತಮ್ಮ ಕಾರಿನಲ್ಲಿ ಗೃಹಕಚೇರಿಯತ್ತ ಪಯಣ ಬೆಳೆಸಿದ್ದರು. ಹೀಗಾಗಿ ಅವರಿದ್ದ ಕಾರು ಮತ್ತು ಬೆಂಗಾವಲು ಪಡೆಗೆ ಟ್ರಾಫಿಕ್‌ ಫ್ರೀ ಮಾರ್ಗ ಕಲ್ಪಿಸಲಾಗಿತ್ತು. ಇದೇ ಮಾರ್ಗವಾಗಿ ಹಾಸೆಟ್‌ ಆಸ್ಪತ್ರೆಗೆ ಆಂಬ್ಯುಲೆನ್ಸ್‌ ಕೂಡ ತೆರಳಬೇಕಿತ್ತು. 

ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಹಿರಿಯ ಪೊಲೀಸ್‌ ಅಧಿಕಾರಿಗಳು ಅಂಬುಲೆನ್ಸ್‌ಗೆ ಅವಕಾಶ ಮಾಡಿಕೊಡುವ ಸಂಬಂಧ ಸಿಎಂ ಬೆಂಗಾವಲು ಪಡೆ ಜೊತೆ ದೂರವಾಣಿಯಲ್ಲಿ ಚರ್ಚಿಸಿದರು. ಇದಕ್ಕೆ ಬೆಂಗಾವಲು ಪಡೆ ಸಮ್ಮತಿ ಸೂಚಿಸಿತ್ತು. ನಂತರ ಸಿಎಂ ಅವರ ಟ್ರಾಫಿಕ್‌ ಫ್ರೀ ಮಾರ್ಗದಲ್ಲೇ ಆಂಬ್ಯುಲೆನ್ಸ್‌ಗೂ ಅವಕಾಶ ಮಾಡಿಕೊಡಲಾಯಿತು. ಸಿಎಂ ಅವರ ಕಾರನ್ನು ಓವರ್‌ಟೇಕ್‌ ಮಾಡಿ ಆಂಬ್ಯುಲೆನ್ಸ್‌ ಮುಂದೆ ಸಾಗಿತು.  

ಸಂಚಾರ ಪೊಲೀಸರ ಈ ಕ್ರಮ ಹಾಗೂ ಸಿಎಂ ಅವರ ಸಮ್ಮತಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಕಾರಿಗೆ ಸಂಚಾರ ಮುಕ್ತ ಮಾರ್ಗ ಕಲ್ಪಿಸಲು ಸಂಚಾರ ಪೊಲೀಸರು ಆ್ಯಂಬುಲೆನ್ಸ್‌ ತಡೆದು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅಷ್ಟೇ ಅಲ್ಲ ಮುಖ್ಯಮಂತ್ರಿಗಳ ಅತೃಪ್ತಿಗೂ ಕಾರಣವಾಗಿದ್ದರು. ತಮ್ಮ ಸಂಚಾರ ಸಂದರ್ಭದಲ್ಲಿ ಯಾವುದೇ ಆ್ಯಂಬುಲೆನ್ಸ್‌ ತಡೆಹಿಡಿಯಬಾರದೆಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ ನಂತರ ಸಂಚಾರ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next