ಬೆಂಗಳೂರು:ಉಸಿರಾಡುವುದಕ್ಕೂ ಸಮಯವಿಲ್ಲದೆ ಕೆಲಸ ಮಾಡುತ್ತಿದ್ದೇನೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ಕೊಡೋದು. ಸುಳ್ಳು ಆರೋಪ ಮಾಡೋದು. ಎಷ್ಟು ದಿನ ಅಂತ ಇದನ್ನು ಸಹಿಸಿಕೊಳ್ಳಲಿ. ಅದಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದು ನಿಜ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೈತ್ರಿಪಕ್ಷದ ವಿರುದ್ಧ ಚಾಟಿ ಬೀಸಿದ್ದಾರೆ.
ಬುಧವಾರ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಮಹಾಧೀವೇಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ಸ್ಥಾನವನ್ನೇ ತ್ಯಾಗ ಮಾಡಿದ ಕುಟುಂಬದ ನಮ್ಮದು. ಹೀಗಾಗಿ ಸಿಎಂ ಸ್ಥಾನಕ್ಕೆ ನಾನೇನು ಅಂಟಿಕೊಂಡು ಕುಳಿತಿಲ್ಲ. ಇಂಥ ವಾತಾವರಣದಲ್ಲಿ ಕೆಲಸ ಮಾಡುವುದಕ್ಕಿಂತ ಅಧಿಕಾರ ಬಿಡಲು ಸಿದ್ಧ ಎಂದು ತಿರುಗೇಟು ನೀಡಿದರು.
ಸಾಲಮನ್ನಾದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿಸಿದರು, ಬೆಂಗಳೂರು ಅಭಿವೃದ್ಧಿಯಾಗಿಲ್ಲ, ಸರ್ಕಾರ ಅಸ್ಥಿರತೆಯಲ್ಲಿದೆ ಹೀಗೆ ಆರೋಪಿಸುತ್ತಿದ್ದರೆ ಕೆಲಸ ಮಾಡೋದು ಹೇಗೆ ಎಂದು ಪ್ರಶ್ನಿಸಿದರು.
ಈ ಬಾರಿ ಬಜೆಟ್ ನಲ್ಲಿ ಸಾಲಮನ್ನಾಕ್ಕೆ ಹಣವಿಟ್ಟಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕಳೆದ 12 ವರ್ಷಗಳಲ್ಲಿ ಆಗದಿದ್ದ ಕೆಲಸಕ್ಕೆ ಬೆಂಗಳೂರಿನಲ್ಲಿ ಚಾಲನೆ ಕೊಟ್ಟಿದ್ದೇನೆ. ಆಟೋ ಚಾಲಕರಿಗೆ, ಮಹಿಳೆಯರಿಗೆ ಎಷ್ಟು ಸಾಧ್ಯವೋ ಅಷ್ಟು ಅನುಕೂಲ ಮಾಡಿಕೊಡಲಾಗಿದೆ. ಇನ್ನೇನು ಅಭಿವೃದ್ಧಿ ಮಾಡಬೇಕು ಹೇಳಿ ಎಂದರು.
ನಮ್ಮ ಸರ್ಕಾರವಿರುವುದು ಯಾವುದೇ ಕುಟುಂಬ, ಜಾತಿಗಲ್ಲ. ಅದು ಜನಸಾಮಾನ್ಯರ, ಮಹಿಳೆಯರ ಕಣ್ಣೀರು ಒರೆಸಲು. ಕೇವಲ ವರ್ಗಾವಣೆ ದಂಧೆ ಮಾಡಿಕೊಂಡು ಇರಲು ನಾನು ಸಿಎಂ ಕುರ್ಚಿ ಮೇಲೆ ಬಂದು ಕುಳಿತಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.