ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಉಕ್ಕಿ ಹರಿಯುತ್ತಿರುವ ಯಮುನಾ ನದಿಯಿಂದ ಉಂಟಾದ ಪ್ರವಾಹವನ್ನು ಎದುರಿಸುತ್ತಿರುವಾಗ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪ್ರವಾಹ ನಿಯಂತ್ರಣ ಮತ್ತು ಸಿದ್ಧತೆಗಾಗಿ ಅಪೆಕ್ಸ್ ಕಮಿಟಿ ಕಳೆದ ಎರಡು ವರ್ಷಗಳಲ್ಲಿ ಸಭೆ ನಡೆಸಲಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಅವರ ರಾಜ್ ನಿವಾಸ್ ಮೂಲಗಳು ಭಾನುವಾರ ಆರೋಪಿಸಿವೆ.
ಎಎಪಿ ಸರಕಾರವು ಆರೋಪವನ್ನು ನಿರಾಕರಿಸಿದ್ದು, ದೆಹಲಿ ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರ ಅಧ್ಯಕ್ಷತೆಯಲ್ಲಿ ಪ್ರವಾಹ ಸಿದ್ಧತೆ ಕುರಿತು ಚರ್ಚಿಸಲು ಸಭೆಯು ಮೇ 9 ರಂದು ನಡೆದಿದೆ. ಪ್ರಕ್ರಿಯೆಯ ನಂತರ ಪ್ರವಾಹ ನಿಯಂತ್ರಣ ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿದೆ.
“ದೆಹಲಿಯ ಎನ್‌ಸಿಟಿಯಲ್ಲಿ ಪ್ರವಾಹ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಲು, ಶಿಫಾರಸು ಮಾಡಲು, ಮೇಲ್ವಿಚಾರಣೆ ಮಾಡಲು ಮತ್ತು ಸಮನ್ವಯಗೊಳಿಸಲು ಅಪೆಕ್ಸ್ ಸಮಿತಿಯ ಅಧ್ಯಕ್ಷರಾಗಿ, ಸಿಎಂ ಕೇಜ್ರಿವಾಲ್ ಅವರು ಈ ವರ್ಷದ ಜೂನ್-ಅಂತ್ಯದಲ್ಲಿ ನಿಗದಿಯಾಗಿದ್ದ ಸಮಿತಿಯ ಕಡ್ಡಾಯ ಸಭೆಗೆ ಅವಕಾಶ ನೀಡದಿರಲು ನಿರ್ಧರಿಸಿದ್ದಾರೆ, ಪರಿಣಾಮ ಜೂನ್ 19 ರಂದು ಕಂದಾಯ ಇಲಾಖೆ ಇದಕ್ಕೆ ಕಡತವನ್ನು ವರ್ಗಾಯಿಸಿದೆ. ಕಳೆದ ವರ್ಷವೂ ಕೇಜ್ರಿವಾಲ್ ಈ ಸಭೆ ನಡೆಯಲು ಬಿಡಲಿಲ್ಲ ಎಂದು ರಾಜ್ ನಿವಾಸ್ ಮೂಲಗಳು ತಿಳಿಸಿವೆ.
ದೆಹಲಿ ಸಿಎಂ ನೇತೃತ್ವದ ಈ ಉನ್ನತಾಧಿಕಾರ ಸಮಿತಿಯು ಎಲ್ಲಾ ಸಚಿವರು, ದೆಹಲಿ ಸಂಸದರು, ಎಎಪಿಯ ನಾಲ್ವರು ಶಾಸಕರು ಮತ್ತು ಮುಖ್ಯ ಕಾರ್ಯದರ್ಶಿ, ದೆಹಲಿ ಅಭಿವೃದ್ಧಿ ಪ್ರಾಧಿಕಾರ, ಜಿಒಸಿ-ಭಾರತೀಯ ಸೇನೆ ಮತ್ತು ಕೇಂದ್ರ ಜಲ ಆಯೋಗದ ( CWC) ಸದಸ್ಯರಂತಹ ಇತರ ಪಾಲುದಾರರನ್ನು ಒಳಗೊಂಡಿರುತ್ತದೆ . ಮಾನ್ಸೂನ್ ಪ್ರಾರಂಭವಾಗುವ ಮೊದಲು ಜೂನ್ ಅಂತ್ಯದ ವೇಳೆಗೆ ಯಾವುದೇ ದಿನಾಂಕದಂದು ಸಭೆ ನಡೆಸಬೇಕಾಗಿದೆ.ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಪ್ರತಿ ವರ್ಷ ಪ್ರವಾಹ ನಿಯಂತ್ರಣ ಆದೇಶ ರವಾನಿಸಲು ನಿರ್ಧರಿಸಬೇಕು ಎಂದು ಮೂಲಗಳು ತಿಳಿಸಿವೆ.