Advertisement

ನೀತಿ ಸಂಹಿತೆ ತೆರವು; ಆಡಳಿತ ಯಂತ್ರಕ್ಕೆ ಚುರುಕು ತಂದ ಸಿಎಂ ಸಿದ್ದರಾಮಯ್ಯ

12:58 AM Jun 12, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ನೀತಿ ಸಂಹಿತೆ ಅಂತ್ಯಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದ್ದು, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಶಕ್ತಿಸೌಧಕ್ಕೆ ಸಚಿವರು ಹಾಗೂ ಅಧಿಕಾರಿಗಳ ದಂಡು ಆಗಮಿಸಿದ್ದು, ಎರಡು ತಿಂಗಳ ಬಳಿಕ ವಿಧಾನಸೌಧ ಕಳೆಗಟ್ಟಿದೆ.

ಆರಂಭದಲ್ಲಿ ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ವಾಣಿಜ್ಯ ತೆರಿಗೆ, ಅಬಕಾರಿ, ಗಣಿ ಮತ್ತು ಭೂ ವಿಜ್ಞಾನ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ, ವೈದ್ಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಇಲಾಖೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿದರು. ವಿಶೇಷವಾಗಿ ತೆರಿಗೆ ಸಂಗ್ರಹಣೆ, ಗುರಿ-ಸಾಧನೆ ಹಾಗೂ ಪ್ರಮುಖ ನೀತಿ-ನಿರೂಪಣ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಎರಡು ತಿಂಗಳ ಬಳಿಕ ನಡೆಯುತ್ತಿರುವ ಸಭೆಯಾದ್ದರಿಂದ ಮಹತ್ವದ ವಿಷಯಗಳು ಚರ್ಚೆಗೆ ಬರಲಿದೆ. ಲೋಕಸಭಾ ಚುನಾವಣೆಯ ಏಳು-ಬೀಳು, ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಆದ ಹಿನ್ನಡೆ ಮತಿತ್ತರ ಅನೇಕ ವಿಷಯಗಳ ಬಗ್ಗೆ ಸಭೆ ಬಳಿಕ ಅನೌಪಚಾರಿಕ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಭೆಯನ್ನೂ ಕರೆಯಲಾಗಿದ್ದು, ನೀತಿ ಸಂಹಿತೆ ಮುಕ್ತಾಯಗೊಂಡ ಬಳಿಕ ರಾಜ್ಯ ಸರಕಾರ ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕೆ ಇಳಿದಂತಾಗಲಿದೆ.

ಮತ್ತೆ ಪರಿಷ್ಕರಣೆ?
ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ಇಲಾಖೆಗೆ ನೀಡಿದ ತೆರಿಗೆ ಸಂಗ್ರಹಣೆ ಗುರಿ ಶೇ. 110 ಸಾಧನೆಯಾಗಿದೆ. ಆಡಳಿತ ಸುಧಾರಣ ಕ್ರಮಗಳ ಮೂಲಕ ಇನ್ನಷ್ಟು ಹೆಚ್ಚಳ ಸಾಧ್ಯವಿದೆ. ಇದರ ಜತೆಗೆ ಮಾರ್ಗದರ್ಶಿ ದರ ಪರಿಷ್ಕರಣೆ ಬಗ್ಗೆ, ಇನ್ನಷ್ಟು ತೆರಿಗೆ ಸಂಗ್ರಹ ಮಾಡುವ ಸಾಧ್ಯತೆಯ ಬಗ್ಗೆಯೂ ಪ್ರಸ್ತಾವಿಸಲಾಗಿದೆ. ಹೀಗಾಗಿ ಕಂದಾಯ ಇಲಾಖೆ ಮಾರ್ಗಸೂಚಿ ದರ ಮತ್ತೆ ಪರಿಷ್ಕರಣೆಯಾಗಬಹುದೇ ಎಂಬ ಅನುಮಾನ ಮೂಡಿದೆ.

Advertisement

2023-24ರಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 20 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಣೆ ಗುರಿಗೆ ಪ್ರತಿಯಾಗಿ 20,287.30 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಜಿಐಎಸ್‌ ಆಧಾರಿತ ಆಸ್ತಿಗಳ ವಿವರ ಹಾಗೂ ಮಾರ್ಗಸೂಚಿ ದರ ನಿಗದಿ ಮಾಡುವುದರಿಂದ ರಾಜಸ್ವ ಸೋರಿಕೆ ತಡೆಗಟ್ಟಲು ಸಾಧ್ಯವಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾವಿಸಿದ್ದಾರೆ.

ಸೌಲಭ್ಯ ಹೆಚ್ಚಿಸಿ
ಇದೇ ವೇಳೆ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ನಾಗರಿಕ ಸೌಲಭ್ಯ ಹೆಚ್ಚಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದ್ದು, ದಸ್ತಾವೇಜುಗಳ ನೋಂದಣಿಯನ್ನು ಡಿಜಿಟಲೀಕರಣಗೊಳಿಸಲು ಕಾಯ್ದೆ ತಿದ್ದುಪಡಿ ಮಾಡುವ ಬಗ್ಗೆಯೂ ಸೂಚನೆ ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next