Advertisement

ಬಬಲೇಶ್ವರ ಕ್ಷೇತ್ರಕ್ಕೆ ಸಿಎಂ ವಿಶೇಷ ಆದ್ಯತೆ

03:28 PM Jul 10, 2017 | Girisha |

ವಿಜಯಪುರ: ರಾಜ್ಯಭಾರ ಮಾಡಿದ ಯಾವುದೇ ಮುಖ್ಯಮಂತ್ರಿಗಳು ಕೂಡಾ ತಮ್ಮ ಕ್ಷೇತ್ರದ ಒಂದು ಹೋಬಳಿಗೆ ನೀಡದ
ಅದ್ಯತೆಯನ್ನು ನಾನು ಸಚಿವನಾದ ಕೂಡಲೇ ತಿಕೋಟಾ ಹೋಬಳಿಗೆ ತುಬಚಿ-ಬಬಲೇಶ್ವರ ಏತ ನೀರಾವರಿಗಾಗಿ ಚಾಲನೆ ನೀಡಿ 3,600 ಕೋಟಿ ಅನುದಾನ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ ಹೇಳಿದರು.

Advertisement

ರವಿವಾರ ಜಾಲಗೇರಿ ಗ್ರಾಮದ ಡೋಕಳೆವಾಡಿ ವಸ್ತಿಯ ನೀನಾಬಾಯಿ ದೇವಸ್ಥಾನದ ಬಳಿ ನೀರಾವರಿ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟಿಸಿ, ನೀನಾಬಾಯಿ ನೂತನ ದೇವಸ್ಥಾನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತಿಕೋಟಾ ಹೋಬಳಿಗೆ ಒಂದರಲ್ಲೇ 6.2 ಟಿಎಂಸಿ ಅಡಿ ನೀರು ಬಳಕೆ ಮಾಡಿ 1.33 ಲಕ್ಷ ಎಕರೆ ಪ್ರದೇಶ ನೀರಾವರಿಗೆ ಕಲ್ಪಿಸುವ ಐತಿಹಾಸಿಕ ಕೆಲಸ ಮಾಡಿದ್ದೇನೆ ಎಂದರು. 

ಮಹದಾಯಿ ಯೋಜನೆಯಲ್ಲಿ 3 ರಾಜ್ಯಗಳ 4 ಜಿಲ್ಲೆಗಳಿಗೆ ಕೇವಲ 7 ಟಿಎಂಸಿ ಅಡಿ ನೀರಿಗಾಗಿ ದೊಡ್ಡ ವ್ಯಾಜ್ಯವೇ ಏರ್ಪಟ್ಟಿದೆ. ಇಂಥ ಸ್ಥಿತಿಯಲ್ಲೇ ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಜ್ಯಕ್ಕೆ ಹಂಚಿಕೆ ಆಗಿರುವ ನೀರಿನಲ್ಲಿ ತಿಕೋಟಾ ಭಾಗ ಒಂದಕ್ಕೇ 6.2 ಟಿಎಂಸಿ ಅಡಿ ನೀರು ಬಳಸಿ ಬೃಹತ್‌ ಪ್ರಮಾಣದ ಯೋಜನೆ ರೂಪಿಸಲಾಗಿದೆ.  ತಿಕೋಟಾ ಹೋಬಳಿಯಲ್ಲಿ ಉಳಿಯುವಅರಕೇರಿ, ಬರಟಗಿ, ಹಂಚನಾಳಗಳಿಗೆ ತಿಡಗುಂದಿ ವಿಸ್ತರಣಾ ಕಾಲುವೆಯಿಂದ ನೀರಾವರಿ ಮಾಡುತ್ತಿದ್ದೇವೆ ಎಂದರು. 

ಪ್ರಸಕ್ತ ಸಂದರ್ಭದಲ್ಲಿ ಮಳೆ ಆಧಾರಿತ ಕೃಷಿ ಮಾಡಲು ಯುವಕರು ಮುಂದೆ ಬರುತ್ತಿಲ್ಲ. ಆದರೆ ಈ ಭಾಗದಲ್ಲಿ 15-20 ಕೆರೆ-ಬಾಂದಾರ್‌ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಇಡಿ ಪ್ರದೇಶ ನೀರಾವರಿ ಸೌಲಭ್ಯ ಕಾಣಲಿದೆ. ಹೀಗಾಗಿ ಈ ಭಾಗದ ಪ್ರತಿಯೊಬ್ಬ ಯುವಕರೂ ಕೃಷಿಯತ್ತ ಚಿತ್ತ ನೆಡಲಿದ್ದಾರೆ ಎಂದು ವಿಶ್ವಾ ಸ ವ್ಯಕ್ತಪಡಿಸಿದರು. 

ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ಜಿಪಂ ಸದಸ್ಯ ರಾಜಶೇಖರ ಪವಾರ, ಮಾಜಿ ಸದಸ್ಯ ತಮ್ಮಣ್ಣ ಹಂಗರಗಿ, ರಾಜುಗೌಡ
ಪಾಟೀಲ, ಉದ್ಯಮಿ ಎಸ್‌.ಎಚ್‌. ನಾಡಗೌಡ ಮಾತನಾಡಿದರು. ವಾಮನ್‌ ಚವ್ಹಾಣ, ವಿಠೊಬಾ ಜಾಧವ, ತುಕಾರಾಮ ಜಾಧವ, ಧನಸಿಂಗ್‌ ಚವ್ಹಾಣ, ಓಗೆಪ್ಪ ಗೋಪಣೆ, ಸಾಗರ ಚವ್ಹಾಣ, ದಶರಥ ದತ್ತಾ ಜಾಧವ, ಸಿಪಿಐ ರಾಮಚಂದ್ರ ಚೌಧರಿ, ಕೆಆರ್‌ಐಡಿಎಲ್‌ನ ಮತ್ತಿಗಟ್ಟಿ ವೇದಿಕೆಯಲ್ಲಿದ್ದರು. ಸೋಮಶೇಖರ ಕುರ್ಲೆ ಸ್ವಾಗತಿಸಿದರು. ರಾಜೇಂದ್ರ ಬಿರಾದಾರ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next