Advertisement

ಹೂಡಿಕೆ ಮಾಡಲು ಉದ್ಯಮಿಗಳಿಗೆ ಸಿಎಂ ಆಹ್ವಾನ

10:55 PM Jul 02, 2019 | Lakshmi GovindaRaj |

ಬೆಂಗಳೂರು: “ಕರ್ನಾಟಕವು ದೇಶದಲ್ಲಿ ಪ್ರಗತಿಪರ ಕೈಗಾರಿಕಾ ಸ್ನೇಹಿ ರಾಜ್ಯವಾಗಿದೆ. ಹೂಡಿಕೆಗೆ ಅತ್ಯುತ್ತಮ ವಾತಾವರಣ ಕಲ್ಪಿಸಲಾಗಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಅಮೆರಿಕ ಪ್ರವಾಸದಲ್ಲಿರುವ ಅವರು ಮಂಗಳವಾರ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ಹೂಡಿಕೆದಾರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. “ಜಾಗತಿಕ ಮಟ್ಟದಲ್ಲೂ ಕರ್ನಾಟಕ ರಾಜ್ಯ ಉತ್ತಮ ಹೆಸರು ಪಡೆದಿದೆ. ಸತತ ಮೂರನೇ ವರ್ಷ ಹೂಡಿಕೆಯಲ್ಲಿ ನಂ.1 ಸ್ಥಾನ ಪಡೆದಿದೆ’ ಎಂದು ಹೇಳಿದರು.

ಇತ್ತೀಚೆಗೆ ರಾಜಧಾನಿ ಬೆಂಗಳೂರು ವಿಶ್ವದ ಅತ್ಯಂತ ಆಕರ್ಷಣೀಯ ನಗರ ಎಂಬ ಹೆಸರು ಪಡೆದಿದೆ. ರಾಜ್ಯ ಸರ್ಕಾರವು ಕೈಗಾರಿಕೆ ಸ್ನೇಹಿ ನೀತಿಗಳನ್ನು ಅಳವಡಿಸಿಕೊಂಡಿರುವುದರಿಂದ ಹಾಗೂ ಅತ್ಯುನ್ನತ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲ ಇರುವ ಕಾರಣ ಹೂಡಿಕೆದಾರರು ಬರುತ್ತಿದ್ದಾರೆ ಎಂದು ತಿಳಿಸಿದರು.

ಒಟ್ಟಾರೆ ದೇಶದ ಬೆಳವಣಿಗೆಯಲ್ಲಿ ಕರ್ನಾಟಕವು ಯಂತ್ರೋಪಕರಣ ವಲಯದಲ್ಲಿ ಶೇ.50, ಐಟಿ ವಲಯದಲ್ಲಿ ಶೇ.39, ಏರ್‌ಕ್ರಾಪ್ಟ್ ವಲಯದಲ್ಲಿ ಶೇ.67, ಜೈವಿಕ ತಂತ್ರಜ್ಞಾನದಲ್ಲಿ ಶೇ.33 ರಷ್ಟು ಕೊಡುಗೆ ನೀಡುತ್ತಿದೆ. 3ಡಿ ತಂತ್ರಜ್ಞಾನ, ರೋಬೋಟಿಕ್ಸ್‌, ನ್ಯಾನೋ ತಂತ್ರಜ್ಞಾನ, ವೈದ್ಯ ತಂತ್ರಜ್ಞಾನದಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಕೈಗಾರಿಕೆಗಳಿಗೆ ಹಾಗೂ ಹೂಡಿಕೆದಾರರಿಗೆ ಅಗತ್ಯವಾದ ಅನುಮತಿ ಏಕಗವಾಕ್ಷಿ ಪದ್ಧತಿಯಡಿ ನೀಡಲಾಗುತ್ತಿದೆ. ಯಾವುದೇ ತೊಂದರೆ ಇಲ್ಲದೆ ಸರಳ ವಿಧಾನದಲ್ಲಿ ಅನುಮತಿ ಪ್ರಕ್ರಿಯೆ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇಪ್ಪತ್ತಕ್ಕೂ ಹೆಚ್ಚು ನೀತಿಗಳ ಮೂಲಕ ಕೈಗಾರಿಕೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

Advertisement

2019-24 ಕೈಗಾರಿಕೆ ನೀತಿ ಕರಡು ಸಿದ್ಧವಾಗುತ್ತಿದೆ. ಹೂಡಿಕೆಗೆ ಹೆಚ್ಚು ಉತ್ತೇಜನ ಹಾಗೂ ಉದ್ಯೋಗ ಸೃಷ್ಟಿ ಇದರ ಪ್ರಮುಖ ಗುರಿ. ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಮೈಸೂರು, ಕೊಪ್ಪಳ, ಬಳ್ಳಾರಿ, ಹಾಸನ, ಕಲಬುರಗಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೀದರ್‌, ತುಮಕೂರು ನಗರಗಳಲ್ಲಿ ಟೈಲ್ಸ್‌, ಸೋಲಾರ್‌, ಎಲ್‌ಇಡಿ ಲೈಟ್ಸ್‌, ಟೆಕ್ಸ್‌ಟೈಲ್‌ ಸೇರಿದಂತೆ 9 ಕೈಗಾರಿಕೆ ವಲಯಗಳ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಹೀಗಾಗಿ, ಹೂಡಿಕೆಗೆ ಕರ್ನಾಟಕ ಆಯ್ಕೆ ಮಾಡಿಕೊಳ್ಳಿ ಎಂದು ಹೂಡಿಕೆದಾರರಲ್ಲಿ ಮನವಿ ಮಾಡಿದರು.

ಎಂಎಸ್‌ಎಂಇ ವಲಯದಲ್ಲೂ ರಾಜ್ಯವು ಬೆಳವಣಿಗೆಯತ್ತ ಮುನ್ನಡೆದಿದೆ. ಕೆಎಸ್‌ಎಫ್ಸಿ ವತಿಯಿಂದ ಶೇ.10 ರಷ್ಟು ಅನುದಾನ ಯೋಜನೆಯು ಹೊಸ ಯೋಜನೆಗಳನ್ನು ಕೈಗೊಳ್ಳಲು ಆನುಕೂಲವಾಗುತ್ತಿದೆ. ರಾಜ್ಯವು ನೂತನ ಕ್ಲಸ್ಟರ್‌ ಅಭಿವೃದ್ಧಿ ಯೋಜನೆಯನ್ನು ಎಂಎಸ್‌ಎಂಇ ವಲಯಕ್ಕೆ ಘೋಷಿಸಿದೆ. ಐದು ಕೋಟಿ ರೂ.ವರೆಗೆ ಬಂಡವಾಳ ರಾಜ್ಯ ಸರ್ಕಾರದಿಂದ ಕೊಡಲಾಗುವುದು ಎಂದು ಹೇಳಿದರು.

ಸರ್ಕಾರವು ಮುಂದೆ ಆಯೋಜಿಸುವ ಜಾಗತಿಕ ಹೂಡಿಕೆದಾರರರ ಸಮಾವೇಶಕ್ಕೆ ನಿಮ್ಮನ್ನು ಸ್ವಾಗತಿಸುತ್ತೇನೆ. ಇದಕ್ಕೆ ಸಂಬಂಧಿಸಿದಂತೆ ಕೀರ್ತಿ ಸ್ವಾಮಿ ಹಾಗೂ ಎಲಿಶಾ ಪುಲವರ್ತಿ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ಅಲ್ಲಿನ ಸರ್ಕಾರದ ಪ್ರತಿನಿಧಿಗಳು, ಕೈಗಾರಿಕೆ ಮತ್ತು ವಾಣಿಜ್ಯ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next